ಬೆಂಗಳೂರು:ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ನಾನು ಯಾವುದೇ ಷರತ್ತಿಲ್ಲದೆ ಬೇಷರತ್ತಾಗಿ ಬಿಜೆಪಿ ಸೇರಿದ್ದೇನೆ.ಇಲ್ಲಿನ ತತ್ವ, ಸಿದ್ಧಾಂತ ಚೆನ್ನಾಗಿ ಗೊತ್ತು. ಹಾಗಾಗಿ ಟಿಕೆಟ್ ಸೇರಿದಂತೆ ನನಗೆ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಕುಣಿಗಲ್ ಕ್ಷೇತ್ರ ಮತ್ತು ತುಮಕೂರು ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಲಿದ್ದೇನೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ: ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರು, ಸಿಎಂ ಹಾಗೂ ಪಕ್ಷದ ನಾಯಕರು ಗೌರವಯುತವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನೂ ಕೂಡ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನಮ್ಮದು ರಾಷ್ಟ್ರೀಯ ಪಕ್ಷ, ಅದರ ನಿಯಮಕ್ಕೆ ನಾನು ಬದ್ಧನಾಗಿದ್ದೇನೆ. ಕುಣಿಗಲ್ ಬಿಜೆಪಿ ನಾಯಕ ಕೃಷ್ಣಾ ಕುಮಾರ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇವೆ ಎಂದರು.
ಡಿಕೆಶಿಗೆ ಟಾಂಗ್ ನೀಡಿದ ಮುದ್ದಹನುಮೇಗೌಡ:ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿರುವವರನ್ನೂ ಸ್ವಾಗತ ಮಾಡೋದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿ ಸೇರಿ ಎಲ್ಲರೂ ಕಂಫರ್ಟ್ ಆಗಿದ್ದಾರೆ ಎಂದು ಡಿಕೆಶಿ ಮುಕ್ತ ಆಹ್ವಾನಕ್ಕೆ ಮುದ್ದಹನುಮೇಗೌಡ ತಿರುಗೇಟು ನೀಡಿದರು. ವಲಸಿಗರು ಕಾಂಗ್ರೆಸ್ನಲ್ಲಿದ್ದಾಗ ಬಹಳ ನೋವು ಅನುಭವಿಸಿದ್ದರು. ಹಾಗಾಗಿ ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಗೆ ಬಂದವರು ಎಲ್ಲರೂ ಕಂಫರ್ಟ್ ಆಗಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದರು.
ಟಿಕೆಟ್ ಕೇಳಿಲ್ಲ:ನಾನು ಟಿಕೆಟ್ ಬೇಕು ಅಂತ ಎಲ್ಲೂ ಕೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಬಗ್ಗೆ ಮೆಚ್ಚಿ ಬಂದಿದ್ದೇನೆ ಎಂದು ಮಾಜಿ ಸಂಸದ, ನಟ ಶಶಿಕುಮಾರ್ ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕೂಡ ಎಸ್ಸಿ- ಎಸ್ಟಿ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಮೀಸಲಾತಿ ವಿಚಾರವಾಗಿ ಬಹು ವರ್ಷದ ಬೇಡಿಕೆ ಈಡೇರಿಸಿದ್ದಾರೆ. ಚಳ್ಳಕೆರೆ ಟಿಕೆಟ್ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನು ಸನ್ಯಾಸಿಯಲ್ಲ, ಆದರೆ ಪಕ್ಷದ ತೀರ್ಮಾನವೇ ಅಂತಿಮ ಎಂದಿದ್ದಾರೆ.