ಬೆಂಗಳೂರು :ಯಾವುದೇ ರಸ್ತೆ ಕಾಮಗಾರಿ ಮಾಡದೇ ಕಳೆದ ಐದಾರು ತಿಂಗಳಿಂದ ಯಲಹಂಕ - ದೊಡ್ಡಬಳ್ಳಾಪುರ ರಸ್ತೆಯಲ್ಲಿ ಇರುವ ಟೋಲ್ ಗೇಟ್‌ನಲ್ಲಿ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಟೋಲ್ ಗೇಟ್ ಬಳಿ ಸ್ಥಳೀಯರ ನೇತೃತ್ವದಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಪ್ರತಿಭಟನೆ ನಡೆಸಿತು.
ದೊಡ್ಡಬಳ್ಳಾಪುರ ಯಲಹಂಕ ರಸ್ತೆಯಲ್ಲಿರುವ ಟೋಲ್ ಬಳಿ ಸ್ಥಳೀಯರು ಮತ್ತು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಪ್ರತಿಭಟನೆ ನಡೆಸಿ, ಕಳೆದ ಎಂಟು ತಿಂಗಳ ಹಿಂದೆ ಈ ಮಾರ್ಗದಲ್ಲಿ ಟೋಲ್ ನಿರ್ಮಿಸಿದ್ದು ಸುಂಕ ವಸೂಲಾತಿ ಮಾಡುತ್ತಿದ್ದಾರೆ. ಆದರೆ, ಈವರೆಗೂ ಯಾವುದೇ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಾರ್ವಜನಿಕರು ಏಕಮುಖ ರಸ್ತೆಯಲ್ಲೇ ಓಡಾಡುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಟೋಲ್ ಗೇಟ್ ಬಳಿ ಕನ್ನಡಪರ ಸಂಘಟನೆ ಜತೆಗೆ ಪ್ರತಿಭಟನೆ ನಡೆಸಿದ ಸ್ಥಳೀಯರು ದಿನಕ್ಕೆ ಲಕ್ಷಾಂತರ ವಾಹನಗಳು ಇದೇ ರಸ್ತೆಯಲ್ಲಿ ಓಡಾಡುತ್ತವೆ. ಈಗಾಗಲೇ 50ಕ್ಕೂ ಹೆಚ್ಚು ಅಪಘಾತಗಳಾಗಿವೆ. ಸುಮಾರು 23ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.
ಪ್ರತಿಭಟನೆ ವೇಳೆ ಟೋಲ್ ವಿರುದ್ಧ ಧರಣಿ ನಡೆಸಿದ ಸ್ಥಳೀಯರಿಗೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಬೆಂಬಲ ನೀಡಿದ್ದು ಇಂದು ಟೋಲ್‌ನಿಂದ ಸುಮಾರು 8 ಕಿ.ಮೀಗಳಷ್ಟು ದೂರ ರಸ್ತೆ ತಡೆ ನೀಡಲಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.
ಇದೇ ವೇಳೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಮಂಜುನಾಥ ಮಾತನಾಡಿ, ಅಧಿಕಾರಿಗಳು ಪೂರ್ಣವಾಗಿ ರಸ್ತೆ ಕಾಮಗಾರಿ ಮಾಡದೇ ಟೋಲ್ ವಸೂಲಿ ಮಾಡುತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ರು.