ಬೆಂಗಳೂರು:ಸಂಪುಟ ವಿಸ್ತರಣೆ ವಿಳಂಬಕ್ಕೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಎರಡು-ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮಾಧ್ಯಮಗಳಿಗೆ ಸಿಎಂ ಹೇಳಿಕೆ ನೀಡಿದ್ದು ಅದರಂತೆ ಅವರು ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ, ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಮುದಾಯದ ಶ್ರೀಗಳು ಜನಪ್ರತಿನಿಧಿಗಳು ಮನವಿ ಮಾಡಿದ್ದೇವೆ. ಹಲವು ಸಮುದಾಯಕ್ಕೆ ನಿಗಮ ಸ್ಥಾಪನೆ ಮಾಡಿ ನೂರಾರು ಕೋಟಿ ಅನುದಾನ ಕೊಟ್ಟಿದ್ದೀರಿ. ಅದೇ ರೀತಿ ಕರ್ನಾಟಕದಲ್ಲಿ ಕುರುಬ ಸಮುದಾಯ ಮೂರನೇ ದೊಡ್ಡ ಸಮುದಾಯ, ನಮಗೂ ಕೂಡ ನಿಗಮ ಸ್ಥಾಪನೆ ಮಾಡಿ 500 ಕೋಟಿ ರೂ. ಕೊಡುವಂತೆ ಮನವಿ ಮಾಡಿದ್ದೇವೆ. ಇದರ ಸಾಧಕ-ಬಾಧಕ ಪರಿಶೀಲನೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಮತ್ತು ಬಿಜೆಪಿಗೆ ಸಮುದಾಯದ ಪರವಾಗಿ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಸಂಪುಟ ವಿಸ್ತರಣೆ ವಿಳಂಬಕ್ಕೆ ಎಂಟಿಬಿ ನಾಗರಾಜ್ ಬೇಸರ ನಾವು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದೇವೆ. ಬಿಜೆಪಿ ಸರ್ಕಾರ ರಚನೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಈಗಾಗಲೇ ನಮ್ಮನ್ನು ಮಂತ್ರಿ ಮಾಡಬೇಕಿತ್ತು. ಆದರೆ ಆಗಿಲ್ಲ. ಬಹಳ ತಡವಾಗಿದೆ. ತ್ಯಾಗ ಮಾಡಿ ಬಂದಿರುವ ಕುರುಬ ಸಮುದಾಯದ ನಾಲ್ಕು ಜನರನ್ನೂ ಆದಷ್ಟು ಬೇಗ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ನಾವು ಹೋದಾಗಲೆಲ್ಲ ಸಚಿವರನ್ನಾಗಿ ಮಾಡುತ್ತೇವೆ ಎನ್ನುವ ಹೇಳಿಕೆ ನೀಡುತ್ತಲೇ ಇದ್ದಾರೆ. ಈಗಲಾದರೂ ನಾಲ್ಕು ಜನರಿಗೆ ಮಂತ್ರಿ ಮಾಡಿ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಡಬೇಕು. ನಮ್ಮ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಚಿವ ಸ್ಥಾನದ ಆಕಾಂಕ್ಷಿ ಆರ್.ಶಂಕರ್ ಮಾತನಾಡಿ, ನಾವು ಹೋದಾಗಲೆಲ್ಲ ಆದಷ್ಟು ಬೇಗ ಸಚಿವರನ್ನಾಗಿ ಮಾಡುತ್ತೇವೆ ಎನ್ನುತ್ತಾರೆ. ಆದರೆ ಕಾಲ ಕೂಡಿಬಂದಿಲ್ಲ. ಆದಷ್ಟು ಬೇಗ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸವಿದೆ. ನಮಗೆ ಅವಕಾಶ ಕೊಡುವುದಿಲ್ಲ ಎಂದು ಸಿಎಂ ಹೇಳುತ್ತಿಲ್ಲ. ಆದರೆ ಮಂತ್ರಿ ಮಂಡಲ ವಿಸ್ತರಣೆ ಆಗಬೇಕು ಆದಷ್ಟು ಬೇಗ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನಾವು ಹೋದಾಗಲೆಲ್ಲ ನಮ್ಮ ಮುಖ ನೋಡಿದ ಕೂಡಲೇ ನಮ್ಮನ್ನು ಮಂತ್ರಿ ಮಾಡುವುದಾಗಿ ಹೇಳುತ್ತಲೇ ಇರುತ್ತಾರೆ. ಕೇಂದ್ರದ ನಾಯಕರು ಮನಸ್ಸು ಮಾಡಿದರೆ ಇಂದೇ ಸಂಪುಟ ವಿಸ್ತರಣೆ ಆಗಬಹುದು. ನಾವು ಕೂಡ ನಿರೀಕ್ಷೆಯಲ್ಲಿದ್ದೇವೆ. ಯಾವಾಗಬೇಕಾದರೂ ಸಂಪುಟ ವಿಸ್ತರಣೆ ಆಗಬಹುದು ಎಂದರು.
ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣೀಭೂತರಾದ ನಾಲ್ಕು ಜನ ಕುರುಬ ಶಾಸಕರಲ್ಲಿ ಈಗಾಗಲೇ ಒಬ್ಬರಿಗೆ ಅವಕಾಶ ಕೊಟ್ಟಿದ್ದೀರಿ. ಉಳಿದ ಮೂರು ಜನರಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.