ಬೆಂಗಳೂರು:ನನ್ನ ರಾಜಕೀಯ ಜೀವನದಲ್ಲಿ ಯಾವ ಧರ್ಮರಾಯ, ಹರಿಶ್ಚಂದ್ರನನ್ನು ಕಂಡಿಲ್ಲ ಎಂದು ವಿಪಕ್ಷ ನಾಯಕರಿಗೆ ಎಂಟಿಬಿ ನಾಗರಾಜ್ ಟಾಂಗ್ ನೀಡಿದರು.
ಬಿಜೆಪಿ ಸರ್ಕಾರದ ಬಗ್ಗೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಯಾರ್ಯಾರು ಏನೇನು ಹಗರಣ ಮಾಡಿದ್ದಾರೆ, ಎನ್ನುವುದು ಎಲ್ಲ ನನಗೆ ಗೊತ್ತಿದೆ. ಆದರೆ, ಈಗ ಅದರ ಬಗ್ಗೆ ಮಾತನಾಡುವ ಸಮಯ ಅಲ್ಲ. ಈಗ ಕೊರೊನಾ ಇದ್ದು ಅದರ ವಿರುದ್ಧ ಎಲ್ಲರೂ ಪಕ್ಷ ಭೇದ ಬಿಟ್ಟು ಹೋರಾಡಬೇಕಿದೆ. ಸಮಯ ಸಿಕ್ಕಾಗ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ತಾವರೆಕೆರೆ ಕೆರೆ ತುಂಬಿ ಕೋಡಿ ಹರಿಯುತ್ತಿರುವ ಹಿನ್ನೆಲೆ ಕೆರೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ. ನಾನೂ ಸಹ 40 ವರ್ಷ ರಾಜಕರಣ ಮಾಡಿದ್ದೇನೆ. ಮುಖ್ಯಮಂತ್ರಿ ಆಗಿದ್ದಾಗ ಯಾರು ಎಷ್ಟು ಹಗರಣ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಈಗ ಅದರ ಬಗ್ಗೆ ಮಾತನಾಡುವ ಸಮಯವಲ್ಲ ಎಂದರು.
ಈಗ ಕೊರೊನಾ ಇರುವ ಕಾರಣ ಎಲ್ಲರೂ ಅದರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ. ಸಮಯ ಬಂದಾಗ ದಾಖಲೆ ಸಮೇತ ಯಾರ ಬಂಡವಾಳ ಏನು ಎಂಬುದನ್ನು ಬಿಚ್ಚಿಡುತ್ತೇನೆ. ಬಿಜೆಪಿ ವಿರುದ್ಧ ಆರೋಪ ಮಾಡಿ ದೊಡ್ಡ ಹೆಸರು ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಹಲವರು ಸಾವು - ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಆರೋಪ - ಪ್ರತ್ಯಾರೋಪಗಳನ್ನು ಮಾಡುವುದು ಸರಿಯಲ್ಲ. ಇಂದು ನಾವು ಸಾವು - ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದರೆ ಈ ಸಮಯದಲ್ಲಿ ಬೇಡ. ಶಾಸಕರು, ಸಚಿವರು, ಜನಪ್ರತಿನಿಧಿಗಳಾಗಲಿ ಎಲ್ಲರೂ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಉಸ್ತುವಾರಿ ವಹಿಸಿಕೊಂಡು ಕೊರೊನಾ ನಿಯಂತ್ರಿಸಲು ಕೆಲಸ ಮಾಡಬೇಕು ಎಂದು ಹೇಳಿದರು.