ಹೊಸಕೋಟೆ : ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರಕ್ಕೆ ಬರುವ ಅನುದಾನವನ್ನ ಸಚಿವ ಎಂಟಿಬಿ ನಾಗರಾಜ್ ತಡೆಹಿಡಿದಿದ್ದಾರೆ ಅಂತಾ ನಿನ್ನೆ (ಗುರುವಾರ) ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಚಿವ ಎಂಟಿಬಿ ನಾಗರಾಜ್ ಶಾಸಕ ಶರತ್ಗೆ ತಿರುಗೇಟು ನೀಡಿದ್ದಾರೆ.
ಹೊಸಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಎಂಟಿಬಿ ನಾಗರಾಜ್, ಸಚಿವನಾಗಿ ಹೊಸಕೋಟೆಗೆ ನಾನು ಏನು ಮಾಡಿದ್ದೇನಿ ಅಂತ ಶಾಸಕ ಶರತ್ ಕೇಳಿದ್ದಾರೆ. ನಾನು ನೋಡಲ್ ಉಸ್ತುವಾರಿಯಾಗಿ ಹೊಸಕೋಟೆಯನ್ನ ಆಯ್ಕೆ ಮಾಡಿದ್ದೇನೆ. ಪ್ರೋಟೋಕಾಲ್ ಪ್ರಕಾರ, ನನ್ನನ್ನ ಎಲ್ಲಾ ಕಾರ್ಯಕ್ರಮಕ್ಕೂ ಕರೆಯಬೇಕು. ಆದರೆ ಯಾವುದಕ್ಕೂ ಕರೆಯದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದರು.
ನಾನು ಈ ಬಗ್ಗೆ ಏನೂ ಕೇಳಿಲ್ಲ. ಆದರೂ ನನ್ನ ಬಗ್ಗೆ ತಂದೆ ಮಕ್ಕಳು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ರು. ನಗರೋತ್ಥಾನ ಅಡಿ 30 ಕೋಟಿ ಅನುದಾನವನ್ನ ಹೊಸಕೋಟೆಗೆ ನೀಡಿದ್ದೇನೆ. ವಿಶೇಷ ಅನುದಾನದಲ್ಲಿ 30 ಕೋಟಿ ಸೇರಿ 60 ಕೋಟಿ ಕೊಟ್ಟಿದ್ದೇನೆ. ಹೊಸಕೋಟೆಯಲ್ಲಿ ಎಲ್ಲ ಕಡೆ ಈಗಾಗಲೇ ಕಾಮಗಾರಿ ಸಹ ನಡೆಯುತ್ತಿದೆ. ಜತೆಗೆ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ವಿಶೇಷ ಅನುದಾನ ಹೊಸಕೋಟೆಗೆ ಬಂದಿದೆ ಎಂದರು.
ಯುಜಿಡಿಗೆ 56 ಕೋಟಿ ತಂದಿದ್ದೇವೆ. ಶೇ 75ರಷ್ಟು ಕಾಮಗಾರಿ ಸಹ ನಡೆದಿದೆ. ಹೆಚ್ಚುವರಿಯಾಗಿ 28 ಕೋಟಿ ಯುಜಿಡಿ ಕಾಮಗಾರಿಗೆ ಬೇಕು ಅಂದಿದ್ರು. ಹೀಗಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಕೊಡಿಸಿದ್ದೇನೆ. ಆದರೂ ಸಹ ನಾನು ಏನು ಮಾಡಿದ್ದೇನೆ ಅಂತ ಕೇಳ್ತಾರೆ. 2020 ರಿಂದ 23 ರ ವರೆಗೂ ಬಿಜೆಪಿ ಸರ್ಕಾರ ಶಾಸಕರಿಗೆ ಇಲಾಖಾವಾರು ಅನುದಾನ ಬಿಡುಗಡೆ ಮಾಡಿದೆ ಎಂದರು.
ಪಿಎಂಜಿಎಸ್ ಅನುದಾನದಲ್ಲಿ 8 ಕೋಟಿ, ಟಿಎಸ್ಪಿ ಸಿಸಿ ರಸ್ತೆ ಒಳಚರಂಡಿಗೆ ಪಿಡಬ್ಲ್ಯುಡಿಯಿಂದ 3 ಕೋಟಿ, ಬಯಲುಸೀಮೆ ಅನುದಾನದಲ್ಲಿ 20 ಲಕ್ಷ ಬಿಡುಗಡೆಯಾಗಿದೆ ಎಂದು ಪಟ್ಟಿಯನ್ನ ಓದಿದ್ರು. ಒಟ್ಟು 44 ಕೋಟಿ 73 ಲಕ್ಷ ಹಣ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಶಾಸಕರಿಗೆ ವಿವಿಧ ಇಲಾಖೆಗಳಿಂದ ನೀಡಿದೆ. ಇವರೆಡನ್ನೂ ತಂದೆ ಸಂಸದ ಬಚ್ಚೇಗೌಡ ಮಗ ಶಾಸಕ ಶರತ್ ಇಬ್ಬರೆ ಹೋಗಿ ಶಂಕು ಸ್ಥಾಪನೆ ಮಾಡಿದ್ದಾರೆ. ನನ್ನ ಮೇಲೆ ವಿನಾಕಾರಣ ಆರೋಪಗಳನ್ನ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ರು.