ಬೆಂಗಳೂರು: ಅನರ್ಹತೆಯ ಪಟ್ಟ ಕಳೆದುಕೊಳ್ಳುವಲ್ಲಿ ವಿಫಲವಾಗಿರುವ ಎಂಟಿಬಿ ನಾಗರಾಜ್ ಇದೀಗ ತಮ್ಮ ರಾಜಕೀಯ ವಿರೋಧಿಗಳಾದ ಅಪ್ಪ-ಮಗನಿಗೆ ಚೆಕ್ಮೇಟ್ ಕೊಡಲು ಸಚಿವ ಸ್ಥಾನ ನೀಡುವಂತೆ ಸಿಎಂಗೆ ದುಂಬಾಲು ಬಿದ್ದಿದ್ದಾರೆ.
ಉಪ ಚುನಾವಣೆಯಲ್ಲಿ ಸೋತು ನಿರಾಸೆಯಲ್ಲಿರುವ ಎಂಟಿಬಿ ನಾಗರಾಜ್ ಗೆ ಹೊಸಕೋಟೆ ನೂತನ ಶಾಸಕ ಶರತ್ ಬಚ್ಚೇಗೌಡ ನುಂಗಲಾರದ ತುತ್ತಾಗಿದ್ದಾರೆ, ಉಪ ಚುನಾವಣೆಗೂ ಮೊದಲು ಘೋಷಣೆಯಾದ ಯೋಜನೆಗಳಿಗೆ ಶರತ್ ಗುದ್ದಲಿ ಪೂಜೆ ನೆರವೇರಿಸುತ್ತಿರುವುದು ಎಂಟಿಬಿ ನಾಗರಾಜ್ ಆಕ್ರೋಶಗೊಳ್ಳುವಂತೆ ಮಾಡಿದೆ. ನಾನು ತಂದ ಅನುದಾನದಲ್ಲಿ ಇವರು ಗುದ್ದಲಿ ಪೂಜೆ ಮಾಡಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ಗ್ರಹಣದ ದಿನವೂ ಸಿಎಂಗೆ ದುಂಬಾಲು ಬಿದ್ದ ಎಂಟಿಬಿ...! ಶರತ್ ನಡೆಗೆ ಕೆಂಡಾಮಂಡಲರಾಗಿರುವ ಎಂಟಿಬಿ ಸೂರ್ಯ ಗ್ರಹಣದ ದಿನವನ್ನೂ ಲೆಕ್ಕಿಸಿದೆ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ದೌಡಾಯಿಸಿದ್ದರು. ಕ್ಷೇತ್ರದಲ್ಲಿ ಮುಖ ಎತ್ತಿ ಓಡಾಡದಂತಾಗಿದೆ, ನಾನು ತಂದ ಅನುದಾನದಲ್ಲಿ ಶರತ್ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಅವರ ನಾಟಕ ನೀವೇ ನೋಡಿ ಸ್ವಾಮಿ, ನಾನು ಸಚಿವನಾಗಿದ್ದವನು ಆ ಸ್ಥಾನ ಬಿಟ್ಟು ಬಂದೆ. ಈಗ ನನಗೆ ಈ ರೀತಿ ಆಗುತ್ತಿದೆ. ಇದು ಹೀಗೆ ಮುಂದುವರೆದ್ರೆ ಕ್ಷೇತ್ರದ ಮೇಲೆ ನನ್ನ ಹಿಡಿತ ತಪ್ಪುತ್ತದೆ ಎಂದು ಸಿಎಂ ಬಳಿ ಅಳಲು ತೋಡಿಕೊಂಡಿದ್ದಾರೆ.
ನಿಮ್ಮನ್ನು ನಂಬಿ ನಾನು ಬಿಜೆಪಿಗೆ ಬಂದಿದ್ದೇನೆ, ಗೆಲ್ಲಿಸುವ ಭರವಸೆ ಹುಸಿಯಾಯಿತು. ಇದೀಗ ಸಂಸದ ಬಚ್ಚೇಗೌಡ, ಶಾಸಕ ಶರತ್ ರಿಂದಾಗಿ ನನ್ನ ರಾಜಕೀಯ ಜೀವನಕ್ಕೇ ಕೊಡಲಿಪೆಟ್ಟು ಬೀಳುತ್ತಿದೆ. ನಾನು ತಂದ ಅನುದಾನವನ್ನು ನಾನೇ ಕ್ಷೇತ್ರದ ಜನತೆಗೆ ಬಳಕೆ ಮಾಡಬೇಕಾದರೆ ನಾನು ಸಚಿವನಾಗಲೇಬೇಕು. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಆದರೆ ಈ ಅಪ್ಪ ಮಗನನ್ನು ಕಟ್ಟಿಹಾಕಲು ನಾನು ಸಚಿವನಾಗಬೇಕಷ್ಟೇ ಎಂದು ಸ್ಪಷ್ಟವಾಗಿ ಸಿಎಂಗೆ ತಮ್ಮ ಬೇಡಿಕೆಯನ್ನು ತಿಳಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಎಂಟಿಬಿ ನನ್ನ ಸೋಲಿಗೆ ಕಾರಣರಾದ ಸಂಸದ ಬಚ್ಚೇಗೌಡರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಎಂ ಬಿಎಸ್ವೈ ಮುಂದೆ ಅಸಮಧಾನ ಹೊರಹಾಕಿದ್ದಾರೆ. ನನಗೆ ಸಚಿವ ಸ್ಥಾನ ನೀಡಬೇಕು, ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಯನ್ನು ಮತ್ತೊಮ್ಮೆ ಸಿಎಂ ಮುಂದಿಟ್ಟಿರುವ ಎಂಟಿಬಿ ಅಸಮಧಾನದಿಂದಲೇ ಅಲ್ಲಿಂದ ಹೊರನಡೆದಿದ್ದಾರೆ.
ಒಟ್ಟಿನಲ್ಲಿ ಯಡಿಯೂರಪ್ಪ ಪಾಲಿಗೆ ಎಂಟಿಬಿ ಬಿಸಿ ತುಪ್ಪವಾಗಿದ್ದು, ಬೇಡಿಕೆಗೆ ಸಿಎಂ ಮಣಿಯುತ್ತಾರಾ, ಎಂಟಿಬಿಗೆ ಸಚಿವ ಸ್ಥಾನ ಒಲಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.