ಬೆಂಗಳೂರು :ವಾರದಲ್ಲಿ ಮೂರು ದಿನ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಆಕಾಂಕ್ಷಿ ಎಂಟಿಬಿ ನಾಗರಾಜ್ ಒತ್ತಡ ಹೇರುತ್ತಿದ್ದಾರೆ. ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದು ಇದೀಗ ಸಿಎಂ ಬಿಎಸ್ವೈಗೆ ಸವಾಲಾಗಿ ಪರಿಣಮಿಸಿದೆ.
ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಳ್ಳುವ ಮೊದಲು ಸಿಎಂ ಗೃಹ ಕಚೇರಿ ಕೃಷ್ಣಾಗೆ ಎಂಎಲ್ಸಿ ಎಂಟಿಬಿ ನಾಗರಾಜ್ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಭರವಸೆಯಲ್ಲೇ ಕಾಲ ದೂಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಮೂವರು ಎಂಎಲ್ಸಿಗಳಿಗೆ ಸಚಿವ ಸ್ಥಾನ ವಿಚಾರ: ನ. 30ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಕಳೆದ ಅಧಿವೇಶನಕ್ಕೂ ಮೊದಲೇ ಪರಿಷತ್ ಸದಸ್ಯ ಸ್ಥಾನ ಸಿಕ್ಕಿದ್ದು, ಸಚಿವ ಸ್ಥಾನದ ನಿರೀಕ್ಷೆ ಇತ್ತು. ಆದರೆ, ಆಗ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಎಂದು ಹೈಕಮಾಂಡ್ ಹೇಳಿತ್ತು. ಆದರೆ, ಅದಾಗಿ ತಿಂಗಳು ಕಳೆದರೂ ನಮ್ಮನ್ನು ಸಚಿವರನ್ನಾಗಿ ಮಾಡಿಲ್ಲ.
ಚಳಿಗಾಲದ ಅಧಿವೇಶನದಲ್ಲಿ ಸಚಿವರಾಗಿ ಭಾಗವಹಿಸುತ್ತೇವೆ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ. ಯಾವುದೇ ಸ್ಪಷ್ಟ ಮಾಹಿತಿ ನೀಡದೆ ವಿಳಂಬ ಮಾಡಿದರೆ ಹೇಗೆ ಎಂದು ಅಸಮಾಧಾನವನ್ನು ಸಿಎಂ ಎದುರು ಹೊರ ಹಾಕಿದರು ಎನ್ನಲಾಗಿದೆ.
ಎಂಟಿಬಿ ಅಸಮಾಧಾನಕ್ಕೆ ಉತ್ತರ ನೀಡಲು ಸಿಎಂ ಯಡಿಯೂರಪ್ಪ ಪ್ರಯಾಸ ಪಡಬೇಕಾಯಿತು. ಪದೇಪದೆ ಭರವಸೆ ಕೊಟ್ಟು ಕಾಲ ದೂಡುವುದು ಇದೀಗ ಸಿಎಂಗೂ ಸವಾಲಾಗಿ ಪರಿಣಮಿಸಿದೆ.