ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ನೀಡಿದ್ದ ಪೌರಾಡಳಿತ ಖಾತೆಯನ್ನೇ ಮತ್ತೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವುದಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಂಧನ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆಗಳಲ್ಲಿ ಒಂದು ಕೊಡಲಿ ಎಂದು ಬೇಡಿಕೆ ಇರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಸಚಿವ ಎಂಟಿಬಿ ನಾಗರಾಜ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಖಾತೆ ಹಂಚಿಕೆಯಲ್ಲಿನ ಅಸಮಾಧಾನ ಕುರಿತು ಮಾತುಕತೆ ನಡೆಸಿದರು. ಈಗ ನೀಡಿರುವ ಖಾತೆ ನನಗೆ ಒಪ್ಪಿಗೆ ಇಲ್ಲ, ಖಾತೆ ಬದಲಾಯಿಸದೇ ಇದ್ದಲ್ಲಿ ನಾನು ಬೇರೆ ನಿರ್ಧಾರ ಕೈಗೊಳ್ಳಬೇಕಾಗಲಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಎಂಟಿಬಿ ನಾಗರಾಜ್ ಅವರನ್ನು ಸಮಾಧಾನಪಡಿಸಿದ ಸಿಎಂ, ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ, ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್ ನನ್ನನ್ನು ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ತಂದಿದ್ದಾರೆ. ಈಗ ನೀಡಿರುವ ಖಾತೆಗೆ ನನ್ನ ಸಹಮತವಿಲ್ಲ. ಹಾಗಾಗಿ ಖಾತೆ ಬದಲಾವಣೆ ಮಾಡಲು ಕೇಳಿದ್ದೇನೆ. ಮೈತ್ರಿ ಸರ್ಕಾರದಲ್ಲಿ ವಸತಿ ಖಾತೆ ನಿಭಾಯಿಸುತ್ತಿದ್ದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಪೌರಾಡಳಿತ ಖಾತೆ ನೀಡಿದ್ದಾರೆ. ಖಾತೆ ಬದಲಾವಣೆಗೆ ಬೇಡಿಕೆ ಇರಿಸಿದ್ದೇನೆ, ವರಿಷ್ಠರ ಜತೆ ಚರ್ಚಿಸಿ ಹೇಳುತ್ತೇನೆ ಅಂತ ಸಿಎಂ ಹೇಳಿದ್ದಾರೆ. ಖಾತೆ ಬದಲಾಯಿಸುವವರೆಗೂ ಈಗ ಕೊಟ್ಟಿರೋ ಖಾತೆಯಲ್ಲೇ ಮುಂದುವರೆಯುತ್ತೇನೆ. ವಸತಿಗಿಂತ ಒಳ್ಳೇ ಖಾತೆ ಕೇಳಿದ್ದೇನೆ. ಇಂಧನ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆಗಳಲ್ಲಿ ಒಂದು ಕೊಡಲಿ ಎಂದು ಬೇಡಿಕೆ ಇರಿಸಿರುವುದಾಗಿ ತಿಳಿಸಿದ್ದಾರೆ.