ಬೆಂಗಳೂರು:ಮಾಜಿ ಸಿಎಂಸಿದ್ದರಾಮಯ್ಯ ಅವರ ಮಗ ಸಾಯೋಕೆ ಬೈರತಿ ಸುರೇಶ್ ಕಾರಣ. ಅವರ ಮಗನನ್ನು ಹೋಟೆಲ್ನಲ್ಲಿ ಕೂರಿಸಿಕೊಂಡು ಹಾಳು ಮಾಡಿದ್ದೇ ಅವನು. ರಾಜಕೀಯದಲ್ಲಿ ಇನ್ನೂ ಅವನು ಬಚ್ಚಾ, ನನ್ನ ವಿರುದ್ಧ ಮಾತನಾಡುವ ನೈತಿಕತೆ ಅವನಿಗಿಲ್ಲ ಎಂದು ಶಾಸಕ ಬೈರತಿ ಸುರೇಶ್ ವಿರುದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಟೀಕಾಪ್ರಹಾರ ಮಾಡಿದರು.
ಹೊಸಕೋಟೆಯಲ್ಲಿ ಸಮಾವೇಶ ಮಾಡಿ ನನ್ನ ವಿರುದ್ಧ ಮಾತನಾಡಿರುವುದೆಲ್ಲ ಸತ್ಯಕ್ಕೆ ದೂರವಾದದ್ದು. ನನಗೆ 2004ರಲ್ಲಿ ಟಿಕೆಟ್ ನೀಡಿದ್ದು ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಿದ್ದು. ಸಿದ್ದರಾಮಯ್ಯ ನನಗೆ ಸಚಿವ ಸ್ಥಾನ ನೀಡಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ಕುರುಬರನ್ನು ಮಂತ್ರಿ ಮಾಡಿಲ್ಲ ಯಾಕೆ? ಕುರುಬರನ್ನು ಕಡೆಗಣನೆ ಮಾಡಿದ್ದು ಸಿದ್ದರಾಮಯ್ಯ. 2018ರ ಚುನಾವಣೆ ಪ್ರಚಾರದಲ್ಲಿ ಎಂಟಿಬಿ ಗೆಲ್ಲಿಸಿ ಮಂತ್ರಿ ಮಾಡ್ತೀನಿ ಅಂದ್ರಿ ಯಾಕೆ ಮಾಡಿಲ್ಲ? ನಾವು ಗುಂಪು ಕಟ್ಟಿಕೊಂಡು ಪಕ್ಷ ಬಿಡುವ ತೀರ್ಮಾನ ಮಾಡಿದಾಗ ಮನೆಗೆ ಬಂದು ಮಂತ್ರಿ ಮಾಡಿದ್ದು. ಸುಖಾಸುಮ್ಮನೆ ನಾನು ಮಾಡಿದೆ ಎಂದು ಹೇಳಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದರು.
ಎಂಟಿಬಿ ನಾಗರಾಜ್ ಟೀಕಾ ಪ್ರಹಾರ ರಮೇಶ್ ಕುಮಾರ್ ಜೆಡಿಎಸ್ನಲ್ಲಿ ಮದುವೆಯಾಗಿ ಕಾಂಗ್ರೆಸ್‌ನಲ್ಲಿ ಶೋಬಾನೆ ಮಾಡಿಕೊಳ್ಳೊತ್ತಿದ್ದಾನೆ. ಕೋಲಾರದಲ್ಲಿ ಕೆ ಹೆಚ್ ಮುನಿಯಪ್ಪರನ್ನು ಸೋಲಿಸಿದ್ದು ರಮೇಶ್ ಕುಮಾರ್. ಕಾಂಗ್ರೆಸ್ ಪಕ್ಷ ರಮೇಶ್ ಕುಮಾರ್ ಅವರನ್ನು ಕಿತ್ಹಾಕಬೇಕಿತ್ತು. ಅವರ ವಿರುದ್ಧ ಕ್ರಮವಿಲ್ಲ ಯಾಕೆ. ಅರಣ್ಯ ಭೂಮಿ 64ಎಕರೆ ಒತ್ತುವರಿ ಮಾಡಿಕೊಂಡಿರುವುದು ಯಾರಿಗೂ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ನಿನ್ನೆ ನಡೆದ ಸಮಾವೇಶದಲ್ಲಿ ಎರಡೂವರೆ ಸಾವಿರ ಜನ ಸೇರಿದ್ದರು. ಅದರಲ್ಲಿ ಮಾಲೂರು, ಕೆಆರ್‌ಪುರಂ, ದೇವನಹಳ್ಳಿ, ಮಹದೇವಪುರ, ಹೆಬ್ಬಾಳ, ತಮಿಳುನಾಡಿನಿಂದ ಉಳಿದ ಜನರನ್ನು ಕರೆಸಿದ್ದರು. ಹೊಸಕೋಟೆ ಜನರು ಸೇರಿಲ್ಲ. 15ವರ್ಷ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಜನಸೇವೆ ಮಾಡಲು ಬಂದಿದ್ದೇನೆ. ಹಣ ಮಾಡುವ ಅವಶ್ಯಕತೆ ನನಗಿಲ್ಲ. ಕೆಲಸ ಆಗಿಲ್ಲ ನಾನು ಪಾರ್ಟಿ ಬಿಟ್ಟೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ನಲ್ಲಿ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
ದಿನೇಶ್ ಗುಂಡೂರಾವ್ ದುರ್ಬಲ ಅಧ್ಯಕ್ಷ. ಒಂದೇ ಒಂದು ಸೀಟು ಗೆದ್ದಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳೋಕು ಕಿತ್ತಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಸೋಲಿಸಿದವವರನ್ನು ಜೊತೆಯಲ್ಲಿ ಇಟ್ಟುಕೊಂಡು ಭಾಷಣ ಮಾಡಿಸುತ್ತಾರೆ. ಹೊಸಕೋಟೆಗೆ ಯಾರನ್ನೇ ಎದುರಾಳಿಯಾಗಿ ನಿಲ್ಲಿಸಲಿ ನಾವು ಎದುರಿಸುತ್ತೇವೆ ಎಂದು ಸವಾಲೆಸೆದರು.