ಕರ್ನಾಟಕ

karnataka

ಹೊಸ ವರ್ಷಕ್ಕೆ ಎಂಎಸ್ಐಎಲ್ ಗಿಫ್ಟ್​: ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

By ETV Bharat Karnataka Team

Published : Jan 1, 2024, 7:31 PM IST

Updated : Jan 1, 2024, 8:42 PM IST

ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಎಂಎಸ್ಐಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು.

Etv Bharatmsil-inaugurates-the-first-government-premium-liquor-store-in-bengaluru
ಹೊಸ ವರ್ಷಕ್ಕೆ ಎಂಎಸ್ಐಎಲ್ ಗಿಫ್ಟ್​: ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

ಎಂಎಸ್ಐಎಲ್ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಇಲ್ಲಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೋಮವಾರ ಉದ್ಘಾಟಿಸಿದರು.

ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

ಬಳಿಕ ಮಾತನಾಡಿದ ಅವರು, "ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್​ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್​ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರ್ಯಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿವೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ" ಎಂದರು.

ಹೊಸ ವರ್ಷಕ್ಕೆ ಎಂಎಸ್ಐಎಲ್ ಕೊಡುಗೆ

200 ಮಳಿಗೆಳು ಬೋಟಿಕ್ ಆಗಿ ಮೇಲ್ದರ್ಜೆಗೆ:"ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ‌ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು, ಹಂತಹಂತವಾಗಿ‌ ಎಲ್ಲವನ್ನೂ ಬದಲಿಸಲಾಗುವುದು. ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ. ರಾಜಕುಮಾರ್ ರಸ್ತೆ, ಆರ್​ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ" ಎಂದು ತಿಳಿಸಿದರು.

ಇದಲ್ಲದೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್​ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯ ಲಭ್ಯವಾಗಲಿದೆ. ಎಂಎಸ್ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಬೋಟಿಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಇಂತಹ ಬೋಟಿಕ್ ತೆರೆಯಲಿದೆ. ಇವೆಲ್ಲವೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಹಂತಹಂತವಾಗಿ ಆರಂಭವಾಗಲಿವೆ. ಮದ್ಯಪ್ರಿಯರು ಯಾವುದೇ ತೊಂದರೆ ಇಲ್ಲದೆ, ತಮಗೆ ಬೇಕಾದ ದರ್ಜೆಯ ಮದ್ಯದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು ಎಂದು ಮಾಹಿತಿ ನೀಡಿದರು.

ಇಂತಹ ಬೋಟಿಕ್​ಗಳಿಂದ ಸಂಸ್ಥೆಯ ವಹಿವಾಟು ಶೇ.30 ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಸಿಗುವ ಬ್ರ್ಯಾಂಡೆಡ್ ಮದ್ಯಕ್ಕೆ ಗುಣಮಟ್ಟದ ಖಾತ್ರಿ ಇರಲಿದೆ. ಈ ಮೂಲಕ ಸಂಸ್ಥೆಯು ಹೊಸ ಹೆಜ್ಜೆ ಇಡುತ್ತಿದೆ. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದ ಚಿಟ್ ಫಂಡ್ ವ್ಯವಹಾರ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ಫ್ರಾಂಚೈಸಿಗಳ ಆರಂಭ, 10 ಮೆಗಾ ಮೆಡಿಕಲ್ ಶಾಪ್ ಆರಂಭ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಿದೆ. ಜೊತೆಗೆ ಪ್ರತಿಯೊಂದು ವಹಿವಾಟಿನಲ್ಲೂ ಕಾರ್ಪೊರೇಟ್ ಸ್ಪರ್ಶ ನೀಡಲಾಗುವುದು ಎಂದು ವಿವರಿಸಿದರು.

ಎಂಎಸ್ಐಎಲ್ ನಿರ್ದೇಶಕ ಎ.ಎಂ.ಚಂದ್ರಪ್ಪ, ಪ್ರಧಾನ ವ್ಯವಸ್ಥಾಪಕ (ಮೂಲಸೌಕರ್ಯ) ಕೆ.ರವಿಕುಮಾರ್ , ಪ್ರಧಾ‌ನ ವ್ಯವಸ್ಥಾಪಕ ಬಸವರಾಜ, ಚಂದ್ರಶೇಖರ, ಸಿಎಫ್ಒ ಅವಿನಾಶ ಉಪಸ್ಥಿತರಿದ್ದರು.

ಇದನ್ನೂ ಓದಿ:2024 'ಪ್ರಯಾಣಿಕ ಸ್ನೇಹಿ ವರ್ಷ'; ನಗದುರಹಿತ UPI ಸೇವೆ ಘೋಷಿಸಿದ ಕೆಎಸ್ಆರ್​ಟಿಸಿ

Last Updated : Jan 1, 2024, 8:42 PM IST

ABOUT THE AUTHOR

...view details