ಬೆಂಗಳೂರು :ನಗರದ ಯಲಹಂಕದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಗೃಹಿಣಿಯರ ಪ್ಯಾಶನ್ ಶೋನಲ್ಲಿ ಮೇಘಾ ರವೀಂದ್ರಸ್ವಾಮಿ ವಿಜೇತರಾಗುವ ಮೂಲಕ ಮಿಸೆಸ್ ಇಂಡಿಯಾ ಕರ್ನಾಟಕ-2021 ಕಿರೀಟ ಮುಡಿಗೇರಿಸಿಕೊಂಡರು.
ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಶ್ರದ್ಧಾ ದಾಮೋದರ್ ಆಯ್ಕೆಯಾದ್ರೆ, 2ನೇ ರನ್ನರ್ ಅಪ್ ಆಗಿ ನವ್ಯಾಗೌಡ ಮತ್ತು ಶೀತಲ್ ನೆಟಲ್ಕರ್, 3ನೇ ರನ್ನರ್ ಅಪ್ ಆಗಿ ಶಿಲ್ಪಾ ಶ್ರೀಧರ್ ಮತ್ತು ಅರ್ಚನಾ ಜಯರಾಮ್ ಹಾಗೂ 4ನೇ ರನ್ನರ್ ಅಪ್ ಆಗಿ ಡಾ. ಶ್ವೇತಾ ಜಕ್ಕಾ ಮತ್ತು ನೀತು ಆರ್. ಪ್ರಸನ್ನ ಆಯ್ಕೆಯಾದರು. ಮೂರು ಸುತ್ತುಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದ ಗೃಹಿಣಿಯರು ಅಂತಿಮ ಆಯ್ಕೆಗಾಗಿ ತೀವ್ರ ಕಸರತ್ತು ತೋರಿಸಿದರು.
'ಮೇಘಾ' ಮುಡಿಗೇರಿದ 'ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ' ವಿವಿಧ ಆಕರ್ಷಣೆಗಳನ್ನ ಹೊಂದಿದ್ದ ಮಿಸೆಸ್ ಇಂಡಿಯಾ ಕರ್ನಾಟಕ ಫೈನಲ್‍ನಲ್ಲಿ 25 ಸ್ಪರ್ಧಿಗಳು ಭಾಗವಹಿಸಿದ್ದರು. ಆಡಿಷನ್‍ನಲ್ಲಿ ಭಾಗವಹಿಸಿದ್ದ ನೂರಾರು ಗೃಹಿಣಿಯರಲ್ಲಿ ಅಂತಿಮವಾಗಿ 25 ಜನರನ್ನ ಮಾತ್ರ ಫೈನಲ್‍ಗೆ ಆಯ್ಕೆ ಮಾಡಲಾಗಿತ್ತು. ಮೂರು ಸುತ್ತುಗಳ ಮೂಲಕ ಈ ಆಯ್ಕೆಯ ಪ್ರಕ್ರಿಯೆಯನ್ನ ನಡೆಸಲಾಯಿತು.
ಮೇಘಾ ರವೀಂದ್ರಸ್ವಾಮಿ ಮುಡಿಗೇರಿದ 'ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ' ಸ್ಪರ್ಧಿಗಳಿಗೆ ಸಾಂಸ್ಕೃತಿಕ ಹಿನ್ನೆಲೆ ಸಂದೇಶ ಸಾರುವ ಅಥವಾ ಯಾವ ಥೀಮ್ ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಹೀಗಾಗಿ, ಗೃಹಿಣಿಯರು ವಿಭಿನ್ನ-ವಿಶೇಷ ಉಡುಪು, ರೂಪದೊಂದಿಗೆ ತೀರ್ಪುಗಾರರೆದುರು ಪ್ರದರ್ಶ ನೀಡಿದ್ರು. 2ನೇ ಸುತ್ತಿನಲ್ಲಿ ಸಾಸಿ ಎಲೆಗೆಂಝಾ ಎಂಬ ಸ್ಪರ್ಧಿ ವಿನ್ಯಾಸಗಾರ್ತಿಯಾದ ಸಂಧ್ಯಾ ವಿನ್ಯಾಸಗೊಳಿಸಿರುವ ಹವಾಯಿನ್ ಥೀಮ್‍ನಲ್ಲಿ ಕಂಗೊಳಿಸಿದರು.
ಸೊಬಗಿನೊಂದಿಗೆ ಬಿನ್ನಾಣದಿಂದ ಬಳುಕಿದ ನಾರಿಯರ ಪರೇಡ್ ಪ್ರೇಕ್ಷಕರ ಕಣ್ಮನ ರಂಜಿಸಿತು. ನಂತರದಲ್ಲಿ ಅಂತಿಮ ಸುತ್ತಿನಲ್ಲಿ ವೆಸ್ಟರ್ನ್ ಗೌನ್‌ಗಳನ್ನ ಧರಿಸಿ ಸ್ಪರ್ಧಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರು. ಮದುವೆಯಾದ ಮಹಿಳೆಯರಲ್ಲಿರುವ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಸ್ಥಾಪಿತವಾಗಿದೆ.
ನಾಡಿನ ಅನೇಕ ಗೃಹಿಣಿಯರು ತಮ್ಮ ಪ್ರತಿಭೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನ ನಡೆಸಲಾಗುತ್ತೆ. ಈ ಕುರಿತು ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ, ನಿರ್ದೇಶಕಿ ಹಾಗೂ ಮಿಸೆಸ್ ಏಶಿಯಾ ಇಂಟರ್‌ನ್ಯಾಷನಲ್ ಪ್ರತಿಭಾ ಸಂಶಿಮಠ, ಕೇವಲ ಸೌಂದರ್ಯಕ್ಕಷ್ಟೇ ಈ ಸ್ಪರ್ಧೆ ಸೀಮಿತವಲ್ಲ.
ಹೆಣ್ಣಿನೊಳಗೆ ಅಡಗಿರುವ ಅನೇಕ ಕಲೆಯನ್ನ ಅರಿಯುವುದಕ್ಕೆ ಒಂದು ಅತ್ಯುತ್ತಮ ಅವಕಾಶವಾಗಿದೆ. ಇವರೆಲ್ಲಾ ಕೇವಲ ಮಾಡೆಲ್‍ಗಳಷ್ಟೇ ಅಲ್ಲ. ಇಡೀ ಸ್ತ್ರೀ ಸಮುದಾಯಕ್ಕೆ ರೋಲ್ ಮಾಡೆಲ್‍ಗಳು ಎಂಬುದನ್ನ ತೋರಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನ ಆಯೋಜಿಸಲಾಗಿದೆ ಎಂದರು.