ಬೆಂಗಳೂರು : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೇಲೂರು ಹೋಬಳಿಯ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಮೃತ್ಯುಂಜಯ ಸ್ವಾಮೀಜಿ ಅಲಿಯಾಸ್ ರೇಣುಕಾರಾಧ್ಯ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಮೊದಲನೇ ಆರೋಪಿಯಾದ ಮೃತ್ಯುಂಜಯ ಸ್ವಾಮೀಜಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಮನಗರದ ವಿಚಾರಣಾ ನ್ಯಾಯಾಲಯದ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಮೃತ್ಯುಂಜಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಮೃತ್ಯುಂಜಯ ಸ್ವಾಮೀಜಿ ಪರ ವಕೀಲರು ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಮತ್ತು ಮೃತ ಸ್ವಾಮೀಜಿ ಬರೆದ ಮರಣಪತ್ರದಲ್ಲಿ ಅರ್ಜಿದಾರರ ಹೆಸರು ಉಲ್ಲೇಖವಾಗಿಲ್ಲ. ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ರೀತಿಯ ನೇರ ಸಂಬಂಧವಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ದ ಸ್ವಾಮೀಜಿಗೆ ಆತ್ಮ ಹತ್ಯೆಗೆ ಪ್ರಚೋದನೆ ನೀಡಿದ ಆರೋಪವಿದೆ. ಇದೇ ಕಾರಣಕ್ಕೆ ವಿಚಾರಣಾ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ಅರ್ಜಿ ವಜಾ ಮಾಡಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಜಾಮೀನು ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಬಸವಲಿಂಗ ಸ್ವಾಮೀಜಿ ಬಂಡೆಮಠದ ತಮ್ಮ ಕೊಠಡಿಯಲ್ಲಿ 2022ರ ಅಕ್ಟೋಬರ್ 23ರಂದು ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ಅದರ ಮರು ದಿನ ಅ.24ರ ಬೆಳಗ್ಗೆ 7 ಗಂಟೆಗೆ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುದೂರು ಠಾಣಾ ಪೊಲೀಸರು ಮೃತ ಸ್ವಾಮೀಜಿಯ ಮರಣ ಪತ್ರ ಆಧರಿಸಿ ರೇಣುಕಾರಾಧ್ಯ (ಮೃತ್ಯುಂಜಯ ಸ್ವಾಮಿ), ಜೆ.ಚಂದು ಅಲಿಯಾಸ್ ನೀಲಾಂಬಿಕೆ, ನಿವೃತ್ತ ಶಿಕ್ಷ ಎಂ.ಮಹದೇವಯ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಬಿ.ಸಿ. ಸುರೇಶ್ ಅವರನ್ನು ಬಂಧಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಅಪರಾಧಿಕ ಒಳಸಂಚು ರೂಪಿಸಿದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿತ್ತು. 2022ರ ಅಕ್ಟೋಬರ್ 30ರಿಂದ ನ್ಯಾಯಾಂಗ ಬಂಧನದಲ್ಲಿರುವ ಮೃತ್ಯುಂಜಯ ಸ್ವಾಮೀಜಿ ಜಾಮೀನು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.