ಬೆಂಗಳೂರು : ನನ್ನ ಕೋಟಾ ಬಿಟ್ಟು ಹೆಚ್ಚು ರೆಮ್ಡೆಸಿವಿರ್ ಇಂಜಕ್ಷನ್ ತಗೊಂಡಿಲ್ಲ. ಯಾವುದೇ ತನಿಖೆ ಬೇಕಾದರೆ ಮಾಡಲಿ ಎಂದು ಸಂಸದ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರೆಮ್ಡೆಸಿವಿರ್ ಔಷಧವನ್ನು ಸಂಗ್ರಹಿಸಿಟ್ಟಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು. ನಾನು ಹೆಚ್ಚುವರಿ ರೆಮ್ಡೆಸಿವಿರ್ ಔಷಧವನ್ನು ಸಂಗ್ರಹಿಸಿಟ್ಟಿರಲಿಲ್ಲ.
ಡಿಕೆಶಿ ಅವರಿಗೆ ಆ ಮಾಹಿತಿ ಇಲ್ಲ. ಹೀಗಾಗಿ, ಅವರು ಆರೋಪ ಮಾಡಿದ್ದಾರೆ. ನಾನು ಅವರಿಗೆ ಎಲ್ಲಾ ಮಾಹಿತಿ ನೀಡುತ್ತೇನೆ. ನಾನೇ ಖುದ್ದು ಡ್ರಗ್ ಕಂಟ್ರೋಲರ್‌ಗೆ ಮಾತನಾಡಿ ರೆಮ್ಡೆಸಿವಿರ್ ಔಷಧವನ್ನು ಬೆಂಗಳೂರಿನಿಂದ ಗುಲ್ಬರ್ಗಕ್ಕೆ ವಿಮಾನದಲ್ಲಿ ಕಳಿಸಲಾಗಿದೆ ಎಂದರು.
ಕಲಬುರಗಿಯಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದ್ದರು. ಆಗ ನಾನು ಕೂಡಲೇ ಬೆಂಗಳೂರಿನ ಡ್ರಗ್ ಕಂಟ್ರೋಲರ್‌ನ ಭೇಟಿಯಾಗಿ ನಮ್ಮ ಕೋಟಾದ ರೆಮ್ಡೆಸಿವಿರ್ ಔಷಧ ಬೇಗ ಕಳಿಸಿಕೊಡುವಂತೆ ಮನವಿ ಮಾಡಿದ್ದೆ.
ಈಗಾಗಲೇ ಕಲಬುರಗಿಗೆ ಕಳಿಸಿಕೊಡಲಾಗಿದೆ ಎಂದು ಅಧಿಕಾರಿ ತಿಳಿದಿದ್ದರು. ಆದರೆ, ಏ.22-25 ಆದರೂ ಔಷಧ ಬಂದಿರಲಿಲ್ಲ. ಹಾಗಾಗಿ, ಮತ್ತೆ ಡ್ರಗ್ ಕಂಟ್ರೋಲರ್‌ನ ಭೇಟಿಯಾಗಿ 480 ವಯಲ್ ರೆಮ್ಡೆಸಿವಿರ್ ಔಷಧ ಕೊಡುವಂತೆ ಮನವಿ ಮಾಡಿದೆ.