ಬೆಂಗಳೂರು: ಬಜರಂಗದಳ ನಿಷೇಧಿಸುವ ಭರವಸೆ ನೀಡುವ ಮೂಲಕ ಕರ್ನಾಟಕದ ಅಸ್ಮಿತೆಯಾಗಿರುವ ಹನುಮ ಭಕ್ತರನ್ನು ಪ್ರಶ್ನೆ ಮಾಡಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ನಿಮಗೆ ತಾಕತ್ತು ಇದ್ದರೆ ಬಜರಂಗದಳ ಬ್ಯಾನ್ ಮಾಡಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಹಾಗು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸವಾಲೆಸೆದಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭಾರತ ವಿರೋಧಿ, ಹಿಂದೂ ವಿರೋಧಿ ಹೇಳಿಕೆ ಕೊಟ್ಟುಕೊಂಡೇ ಬಂದಿದೆ. ಕೇಂದ್ರ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿದ್ದನ್ನು ಕಾಂಗ್ರೆಸ್‌ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪ್ರಚೋದನೆ ಮೇಲೆಯೇ ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಬಜರಂಗದಳ ಭಯೋತ್ಪಾದಕ ಸಂಘಟನೆ ಅಲ್ಲ. ಹಿಂದೂಗಳನ್ನು ಒಗ್ಗೂಡಿಸುವ ಸಂಘಟನೆ. ಕರ್ನಾಟಕದ ಜನತೆ ಹನುಮಂತನ ಭಕ್ತರು. ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಹೇಳಿ ಕಾಂಗ್ರೆಸ್ ಕರ್ನಾಟಕದ ಜನತೆಗೆ ಅವಮಾನ ಮಾಡಿದೆ ಎಂದು ಟೀಕಿಸಿದರು.
ಜಿನ್ನಾರ ಮುಸ್ಲಿಂ ಲೀಗೇ ಇಂದಿನ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವಿರಕ್ಕೂ ಹೆಚ್ಚು ಕೇಸ್ ವಾಪಸ್ ಪಡೆದಿದ್ದರು. ಎಸ್ಡಿಪಿಐ ಅವರೇ ಕಾಂಗ್ರೆಸ್ ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಅಸ್ಮಿತೆ, ಹನುಮ ಭಕ್ತರ ಪ್ರಶ್ನೆ ಮಾಡಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ನಿಮಗೆ ಸವಾಲು ಹಾಕ್ತೀನಿ, ನಿಮಗೆ ತಾಕತ್ ಇದ್ದರೆ ಬಜರಂಗದಳ ಬ್ಯಾನ್ ಮಾಡಿ. ಮೇ 10 ರ ಚುನಾವಣೆಯಲ್ಲಿ ಜನ ನಿಮಗೆ ಉತ್ತರ ಕೊಡುತ್ತಾರೆ ಎಂದು ಹೇಳಿದ್ರು.
ಲಂಕಾದಲ್ಲಿ ರಾವಣನಿಗಾದ ಗತಿ ಕಾಂಗ್ರೆಸ್ ಗೆ ಬರಲಿದೆ: ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವೈಚಾರಿಕವಾಗಿ ದಿವಾಳಿಯಾಗಿರೋ ಪಕ್ಷ. ಅವರ ಮ್ಯಾನಿಫೆಸ್ಟೋ ನಲ್ಲಿ ಪಿಎಫ್‌ಐ, ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಿದ್ದಾರೆ. ಬಜರಂಗದಳ ಬ್ಯಾನ್ ಮಾಡುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಸಂಪೂರ್ಣವಾಗಿ ಹೊರಹಾಕುವ ಕೆಲಸವನ್ನು ಜನರು ಮಾಡಲಿದ್ದಾರೆ. ಬಜರಂಗದಳದವರು ಹನುಮಾನ್ ಭಕ್ತರು. ಅಂದು ಹನುಮಂತ ಲಂಕಾದಲ್ಲಿ ರಾವಣನನ್ನು ಬೇರು ಸಹಿತ ಕಿತ್ತಾಕಿದ್ದ. ಅದೇ ರೀತಿ ಕಾಂಗ್ರೆಸ್‌ನ್ನು ಬೇರು ಸಹಿತ ಕೀಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ತಿರುಗೇಟು ನೀಡಿದರು.
ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಲವು ವರ್ಷಗಳ ಅಧ್ಯಯನದ ನಂತರ ಜಾರಿಗೆ ತರಲಾಗಿದೆ. ಕಾಂಗ್ರೆಸ್ನವರೇ ಹೇಳುವಂತೆ ಎಸಿ ರೂಮಲ್ಲಿ ಕುಳಿತು ಎನ್ಇಪಿ ಮಾಡಿಲ್ಲ. 36 ವರ್ಷದ ಸುದೀರ್ಘ ಚರ್ಚೆ ಬಳಿಕ ಇದನ್ನು ಜಾರಿಗೆ ತರಲಾಗಿದೆ. ಯುವಕರಿಗೆ ಜ್ಞಾನ ನೀಡಬೇಕು. ಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ತರಲು ನಿರ್ಧರಿಸಲಾಗಿದೆ ಎಂದರು.