ಬೆಂಗಳೂರು:ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಕೇಳುತ್ತಿರುವ ಪ್ರತಿಪಕ್ಷ ನಾಯಕರಿಗೆ, ಅಗತ್ಯ ಪ್ರಮಾಣದ ಆಕ್ಸಿಜನ್ ಪೂರೈಸಿದ್ದೇವೆ ಅಂತ ಹೆಮ್ಮೆಯಿಂದ ಹೇಳುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಗೂ, ಎರಡನೇ ಅಲೆಗೂ ಸಾಕಷ್ಟು ಭಿನ್ನತೆ ಇದೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಪಕ್ಷದವರು ಬಹಳ ಆಕ್ರೋಶ ಭರಿತರಾಗಿ ಮಾತನಾಡುತ್ತಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು ಸತ್ತಿವೆ ಎಂದು ಹೇಳುತ್ತಿದ್ದಾರೆ. ನಮ್ಮ 25 ಸಂಸದರು ಏನು ಮಾಡಿದ್ದಾರೆ ಎನ್ನುವುದನ್ನು ನಾವು ತಿಳಿಸುತ್ತೇವೆ. ಕೋವಿಡ್ ಎರಡನೇ ಅಲೆ ಪ್ರಾರಂಭವಾಗುವ ಮೊದಲು, ಅಂದರೆ ಮಾರ್ಚ್ 17ರಂದು ಪ್ರಧಾನಿ ಎಲ್ಲರಿಗೂ ಸೂಚನೆ ಕೊಟ್ಟಿದ್ದರು. ಅದರಂತೆ ಸೋಂಕು ನಿಯುಂತ್ರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಿದ್ರೆ ಮಾಡುತ್ತಿರಲಿಲ್ಲ. ಕೋವಿಡ್ ಎದುರಿಸಲು ನಮಗೆ ಇದ್ದದ್ದು ಲಸಿಕೆ ಎಂಬ ಅಸ್ತ್ರ. ಮೊದಲ ಹಂತದಲ್ಲಿ ವೈದ್ಯರು, ನರ್ಸ್ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಿದ್ದೇವೆ. ಲಸಿಕಾ ಅಭಿಯಾನದ ಆರಂಭದಿಂದ ಅದು ಕಾರ್ಯಗತಗೊಳ್ಳುವ ತನಕ ಶ್ರಮಿಸಿದ್ದೇವೆ ಎಂದರು.
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಓದಿ : ಕೋವಿಡ್ ಸಂದರ್ಭ ಬಿಜೆಪಿ ನಾಯಕರ ಕಾರ್ಯನಿರ್ವಹಣೆ ವಿವರ ಸಲ್ಲಿಕೆ
ಸೆಪ್ಟೆಂಬರ್ ಅಂತ್ಯದ ವೇಳೆಗೆ ತಿಂಗಳಿಗೆ 10 ಕೋಟಿ ಡೋಸ್ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಹೋರಾಡ್ತಿದೆ. ಆದರೆ, ಕಾಂಗ್ರೆಸ್ನವರು ಲಸಿಕೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು, ಬಿಜೆಪಿ ಲಸಿಕೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನೈತಿಕತೆ ಇಲ್ಲದ ಹಿಪೊಕ್ರೇಟ್ಸ್ ರಾಜಕಾರಣಿಗಳು ನಮಗೆ ಕಾಣ್ತಿದ್ದಾರೆ. ಈ ದೇಶದ ಜನರನ್ನು ಕಾಂಗ್ರೆಸ್ನವರು ಏನು ಅಂದುಕೊಂಡಿದ್ದಾರೆ? ಮೊದಲು ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ ಯು.ಟಿ.ಖಾದರ್, ಆಮೇಲೆ ತಾವೇ ಹೋಗಿ ಲಸಿಕೆ ಹಾಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಐಸಿಯು ಬೆಡ್ ಹೆಚ್ಚಳ, ಜೀವ ರಕ್ಷಣೆ, ಬೇಡಿಕೆಗೆ ತಕ್ಕಂತೆ ರೆಮ್ಡಿಸಿವಿರ್, ಆಮ್ಲಜನಕ ಪೂರೈಕೆ ಮಾಡಲಾಗ್ತಿದೆ. ತಪಾಸಣೆ ಹೆಚ್ಚಿಸಲಾಗಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಟೂಲ್ ಕಿಟ್ ಬಳಸಿ, ಶವದ ಮೇಲೆ ರಾಜಕೀಯ ಮಾಡಲು ಹೊರಟಿದೆ. ದೇವೇಗೌಡರ ನಡವಳಿಕೆ ನೋಡಿ ಪ್ರತಿಪಕ್ಷಗಳು ಹೇಗಿರಬೇಕೆಂದು ಕಲಿಯಬೇಕು. ದೇಶ ಸಂಕಷ್ಟದಲ್ಲಿದ್ದಾಗ ಹೇಗೆ ನಡೆದುಕೊಳ್ಳಬೇಕು, ಮುತ್ಸದ್ದಿತನ ಹೇಗಿರಬೇಕೆಂದು ತಿಳಿಯಲು ಬೇರೆ ರಾಜ್ಯ, ರಾಷ್ಟ್ರಗಳ ನಾಯಕರ ಬಳಿ ಹೋಗಬೇಡಿ. ಇಲ್ಲೇ ದೇವೇಗೌಡರನ್ನು ನೋಡಿ ತಿಳಿದುಕೊಳ್ಳಿ ಎಂದರು.