ಬೆಂಗಳೂರು:''ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಸಿದ್ದರಾಮಯ್ಯನವರು ತಮ್ಮ ಅಸಮರ್ಥತೆಯನ್ನು ಮರೆಮಾಚಲು ಸುಳ್ಳನ್ನು ಹೇಳುತ್ತಿದ್ದಾರೆ. ಜೊತೆಗೆ ಮೋದಿ ಸರ್ಕಾರವನ್ನು ದೂಷಿಸಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ'' ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಅಕ್ಕಿ ಸಂಬಂಧ ಕೇಂದ್ರವನ್ನು ದೂಷಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಅವರು, ''ಕರ್ನಾಟಕ ಸರ್ಕಾರ ಹೆಚ್ಚುವರಿ ಅಕ್ಕಿ ಮಾರಾಟಕ್ಕೆ ಮನವಿ ಮಾಡಿದ ನಂತರ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಒಎಂಎಸ್ಎಸ್ ನೀತಿಯನ್ನು ಬದಲಾಯಿಸಿದೆ ಎಂದು ಸಿದ್ದರಾಮಯ್ಯ ಕರ್ನಾಟಕದ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.
''ಆದರೆ, ಜೂನ್ 8ರಂದು ನಡೆದ ಅಂತರ-ಸಚಿವಾಲಯ ಸಮಿತಿಯ ಸಭೆಯ ಅನುಸಾರವಾಗಿ, ರಾಜ್ಯ ಸರ್ಕಾರವು ಪ್ರಾದೇಶಿಕ ಎಫ್ಸಿಐಗೆ ವಿನಂತಿಸುವ 4 ದಿನಗಳ ಮೊದಲು, ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ಬೆಲೆಯಲ್ಲಿನ ಹೆಚ್ಚಳದ ದೃಷ್ಟಿಯಿಂದ ಒಎಂಎಸ್ಎಸ್ ನೀತಿಯಲ್ಲಿ ಬದಲಾವಣೆಯನ್ನು ಈಗಾಗಲೇ ಸೂಚಿಸಲಾಗಿದೆ ಎಂದು ತೋರಿಸುತ್ತದೆ'' ಎಂದು ತಿಳಿಸಿದ್ದಾರೆ. ಈ ಸಂಬಂಧ ನಡಾವಳಿಯ ದಾಖಲೆಯನ್ನು ಟ್ವೀಟ್ ಮಾಡಿದ್ದಾರೆ.
ಈ ನೀತಿಯನ್ನು ಮರುಪರಿಶೀಲಿಸುವ ಪ್ರಕ್ರಿಯೆಯು ಕರ್ನಾಟಕ ಚುನಾವಣೆಗಳು ನಡೆಯುವ ಮುಂಚೆಯೇ ಮಧ್ಯಂತರ ಸಮಿತಿಯಿಂದ ಮೇ ತಿಂಗಳ ಆರಂಭದಲ್ಲಿಯೇ ಪ್ರಾರಂಭವಾಯಿತು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
''ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ತಮ್ಮ ಅಸಮರ್ಥತೆಯನ್ನು ಮರೆಮಾಚಲು ಸುಳ್ಳನ್ನು ಹೇಳುತ್ತಿದ್ದಾರೆ. ಮೋದಿ ಸರ್ಕಾರವನ್ನು ದೂಷಿಸಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಬ್ಸಿಡಿಯ ಅಕ್ಕಿ ಯೋಜನೆಯನ್ನು, ತಮ್ಮದೇ ಯೋಜನೆಯೆಂದು ಬಿಂಬಿಸಿ ಜಾರಿಗೆ ತರಲು ಕಾಂಗ್ರೆಸ್ ಬಯಸಿತ್ತು. ಆದರೆ, ಈಗ ಸಿಕ್ಕಿಬಿದ್ದಾಗ, ಸಾರ್ವಜನಿಕರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಚುನಾವಣೆಯ ಭರವಸೆಯಂತೆ ಕರ್ನಾಟಕದ ಜನರಿಗೆ 10 ಕೆಜಿ ಅಕ್ಕಿ ನೀಡುವ ಬದ್ಧತೆಯ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದರೆ. ಅವರು ಮುಕ್ತ ಮಾರುಕಟ್ಟೆಯಿಂದ 10 ಕೆಜಿ ಅಕ್ಕಿಯನ್ನು ಖರೀದಿಸಿ ಮತ್ತು ಮೋದಿ ಸರ್ಕಾರ ನೀಡುವ 5 ಕೆಜಿ ಅಕ್ಕಿಗೆ ಹೆಚ್ಚುವರಿಯಾಗಿ ವಿತರಿಸಬೇಕು. ಎನ್ಎಫ್ಎಸ್ಎ ಅಡಿಯಲ್ಲಿ ಕಾಂಗ್ರೆಸ್ ಇನ್ನಾದರೂ ಸುಳ್ಳುಗಳನ್ನು ಹೇಳುವುದನ್ನು ನಿಲ್ಲಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್ಗಢ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆ- ಸಿಎಂ ಸಿದ್ದರಾಮಯ್ಯ:ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನ ರೇಸ್ ಕೋರ್ಸ್ ಬಳಿಯ ಶಕ್ತಿಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಅಕ್ಕಿ ಪೂರೈಕೆ ಕುರಿತು ನಾನೇ ತೆಲಂಗಾಣ ಸಿಎಂ ಜೊತೆ ಮಾತನಾಡಿದ್ದೇನೆ. ಆದ್ರೆ, ಅಲ್ಲಿ ಅಕ್ಕಿ ಸಿಗುತ್ತಿಲ್ಲ. ಆಂಧ್ರ ಪ್ರದೇಶ ಜೊತೆಗೆ ನಮ್ಮ ಮುಖ್ಯ ಕಾರ್ಯದರ್ಶಿಗೆ ಮಾತುಕತೆ ನಡೆಸಲು ತಿಳಿಸಿದ್ದೇನೆ ಎಂದರು.
ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆ ನೀಡಿದ್ದಾರೆ. ಛತ್ತೀಸ್ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿಯಿದೆ. ಇದರಿಂದ ಸಾಗಣೆಯ ವೆಚ್ಚವೂ ಜಾಸ್ತಿಯಾಗುತ್ತದೆ. ಇಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡು ನಂತರ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಕಮಿಷನ್ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ರಾಜ್ಯದಲ್ಲೇ ಅಕ್ಕಿ ಲಭಿಸುವುದಾದರೆ, ವಿಜಯೇಂದ್ರ ಕೊಡಿಸಬಹುದು. ಈ ರೀತಿಯ ಹೇಳಿಕೆ ನೀಡುತ್ತಾರಲ್ಲ ವಿಜಯೇಂದ್ರ ಅವರ ಮಿಲ್ನಲ್ಲಿ ಅಕ್ಕಿ ಇದೆಯಾ? ಸುಮ್ನೆ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದನ್ನೂ ಓದಿ:Congress Guaranty: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಸ್ವಲ್ಪ ವಿಳಂಬ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್