ಬೆಂಗಳೂರು: ಬಜೆಟ್ ಪೂರ್ವಭಾವಿಯಾಗಿ ಉದ್ಯಮ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಪರಿಗಣಿಸಿ, ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೂಪುರೇಷೆಗಳನ್ನು ತಯಾರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ತಲುಪಿಸುವ ಕಾರ್ಯ ನಡೆಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಪೂರ್ವಭಾವಿ ಸಂವಾದವನ್ನು ಇಂದು 120ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಸಿ.ಇ.ಓ ಗಳು, ತಂತ್ರಜ್ಞರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ನಗರದ ಬೌರಿಂಗ್ ಇನ್ಸ್ಟಿಟ್ಯೂಟನಲ್ಲಿ ನಡೆಸಿ, ಆರೋಗ್ಯ, ರಿಯಲ್ ಎಸ್ಟೇಟ್, ಫಾರ್ಮಾ, ವಿವಿಧ ಸ್ಟಾರ್ಟ್ ಅಪ್ ಗಳು, ಆಹಾರ ಸಂಸ್ಕರಣೆ ಸೇರಿದಂತೆ ಇತರ ಉದ್ಯಮ ರಂಗದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರಾದ ವತಿಯಿಂದ ಆಗಬೇಕಿರುವ ಕ್ರಮಗಳ ಕುರಿತು ಚರ್ಚೆಸಿದರು.
ಡಿಸೆಂಬರ್ ತಿಂಗಳಿನಲ್ಲಿ ಉದ್ಯಮ ರಂಗದ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಸಭೆ ನಡೆಸಿ, ಅವರಿಂದ ಸಲಹೆ ಪಡೆದು ಮುಂಬರುವ ಬಜೆಟ್ -2023ನಲ್ಲಿ ಅವುಗಳಿಗೆ ಪೂರಕವಾದ ಕ್ರಮ ಕೈಗೊಳ್ಳಲು ಇದರಿಂದ ಸಹಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಕಳೆದ ಕೆಲ ವರ್ಷಗಳಿಂದ ದೇಶದ ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರತಿ ಔದ್ಯಮಿಕ ವಿಭಾಗದಿಂದಲೂ ಸಲಹೆಗಳನ್ನು ಪಡೆದು, ಅದಕ್ಕೆ ಪೂರಕವಾದ ಬಜೆಟ್ ನಿರೂಪಣೆಗೊಳಿಸುತ್ತಿದ್ದು, ದೇಶದ ಸುಧಾರಣೆ, ಸರ್ವತೋಮುಖ ಬೆಳವಣಿಗೆಯಲ್ಲಿ ಇಂತಹ ಕ್ರಮಗಳು ಪೂರಕವಾಗಿವೆ ಎಂದು ಸಂಸದ ಸೂರ್ಯ ತಿಳಿಸಿದರು.
ಈ ಹಿಂದೆ ನಾವು ಬಜೆಟ್ ಮಂಡನೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ನೀಡಿರುವ ಹಲವಾರು ಸಲಹೆಗಳು ಕಾರ್ಯರೂಪಕ್ಕೆ ಬಂದಿದ್ದು, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉದ್ಯಮ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ರವಾನಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರು , ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೂಪುರೇಷೆಗಳನ್ನು ತಯಾರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.