ಬೆಂಗಳೂರು: "ನಮ್ಮ ಪಕ್ಷದ 25 ಜನ ಸಂಸದರು ರಾಜ್ಯದ ಜನರಿಗೆ ಐದು ಕೆಜಿ ಅಕ್ಕಿಯನ್ನು ಕಳೆದ ಮೂರು ವರ್ಷಗಳಿಂದ ಕೊಡಿಸುತ್ತಿದ್ದೇವೆ. ಈಗ ಕಾಂಗ್ರೆಸ್ನಲ್ಲಿ 135 ಜನ ಶಾಸಕರಿದ್ದಾರೆ, ಅವರು ಹತ್ತು ಕೆಜಿ ಅಕ್ಕಿ ತರಲಿ ನೋಡೋಣ" ಎಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ಸವಾಲೆಸೆದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಬೆಲೆ ಏರಿಕೆಯಲ್ಲಿ ಏರುಪೇರು ತಡೆಯಲು ಎಲ್ಲ ರಾಜ್ಯಗಳಿಗೂ ಅಕ್ಕಿ, ಗೋಧಿ ಕೊರತೆ ಆಗದಂತೆ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಮೇ ತಿಂಗಳಲ್ಲೇ ಕೇಂದ್ರ ಸರ್ಕಾರ ನಿಯಮಗಳಲ್ಲಿ ಈ ಬದಲಾವಣೆ ತಂದಿದೆ. ಅನ್ನಭಾಗ್ಯ ಯೋಜನೆ ವಿಚಾರದಲ್ಲಿ ಕೇಂದ್ರ ತಾರತಮ್ಯ ನೀತಿ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ವೃಥಾ ಆರೋಪ ಹೊರಿಸುತ್ತಿದೆ. ರಾಜ್ಯವು ಅಕ್ಕಿ ಬೇಕು ಅಂತ ಎಫ್‌ಸಿಐಗೆ ಪತ್ರ ಬರೆಯುವ ಮೊದಲೇ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ರಾಜ್ಯ ಪತ್ರ ಬರೆಯುವ ಮೊದಲೇ ಎಲ್ಲ ರಾಜ್ಯಗಳ ಎಫ್‌ಸಿಐಗಳಿಗೆ ನಿಯಮಗಳಲ್ಲಿ ಬದಲಾವಣೆಗೆ ಸೂಚನೆ ನೀಡಲಾಗಿತ್ತು" ಎಂದು ಅವರು ತಿಳಿಸಿದರು.
ಸರ್ಕಾರ ಜನರಿಗೆ 15 ಕೆ.ಜಿ ಅಕ್ಕಿ ಕೊಡಬೇಕು: "ಅಂತರ್‌ಸಚಿವಾಲಯ ಸಮಿತಿಯಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಗೋಧಿ ಮಾರಾಟ ಮಾಡದಂತೆ ಸೂಚಿಸಲಾಗಿತ್ತು. ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅವರು ಅಕ್ಕಿ ಕೊಡಲಾಗದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಣಿಯಲಾಗದವನು ನೆಲ ಡೊಂಕು ಅಂದಂಗಾಗಿದೆ ಈ ಸರ್ಕಾರದ ಸ್ಥಿತಿ. ರಾಜ್ಯದ ಜನರನ್ನು ಈ ಸರ್ಕಾರ ದಾರಿ ತಪ್ಪಿಸುತ್ತಿದೆ. ಜನರ ಬಳಿ ಕಾಂಗ್ರೆಸ್ ಸರ್ಕಾರ ಕ್ಷಮೆ ಕೇಳಲಿ. ಅವರು ಹೇಳಿದ್ದು ಒಟ್ಟು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು. ಈಗಾಗಲೇ ಕೇಂದ್ರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನ್ಯಾಯವಾಗಿ ಒಟ್ಟು ಹದಿನೈದು ಕೆಜಿ ಅಕ್ಕಿ ಕೊಡಬೇಕು. ರಾಜ್ಯ ಸರ್ಕಾರ ನಮ್ಮ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿ ಮಾಡಲಿ. ನಮ್ಮ ರೈತರಿಂದ ನೇರವಾಗಿ ಅಕ್ಕಿ ಖರೀದಿಸಲಿ" ಎಂದು ಆಗ್ರಹಿಸಿದರು.
ಮುಂದುವರೆದು ಮಾತನಾಡಿ, "ಬಿಜೆಪಿ ಸಂಸದರ ಪ್ರಯತ್ನದಿಂದಾಗಿಯೇ ಕೋವಿಡ್ ನಂತರ ಪ್ರತಿ ತಿಂಗಳು ಕೇಂದ್ರ ಅಕ್ಕಿ ಕೊಡುತ್ತಿದೆ. ನಮ್ಮೆಲ್ಲರ ಪ್ರಯತ್ನದಿಂದ, ಮೋದಿ ಸರ್ಕಾರದ ಪ್ರಯತ್ನದಿಂದ ರಾಜ್ಯದ ಜನಕ್ಕೆ ಅಕ್ಕಿ ಸಿಗುತ್ತಿದೆ. ತಲಾ ಐದು ಕೆಜಿ ಈ ತಿಂಗಳೂ ಬರುತ್ತದೆ, ಮುಂದಿನ ತಿಂಗಳೂ ಬರುತ್ತದೆ. ಅಕ್ಕಿ ತರುವ ನಮ್ಮ ಸರದಿ ಆಯ್ತು, ಈಗ ನಿಮ್ಮ ಸರದಿ. ನೀವು ಅಕ್ಕಿ ಕೊಡುತ್ತೇವೆ ಅಂತ ವಾಗ್ದಾನ ಮಾಡಿ ಕೇಂದ್ರದ ಮೇಲೆ ಆರೋಪ ಮಾಡಿದರೇ ಹೇಗೆ" ಎಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಅಕ್ಕಿ ಪೂರೈಕೆ ಬಗ್ಗೆ ಕಾಂಗ್ರೆಸ್, ಸಿಎಂ ತಮ್ಮ ಅಸಮರ್ಥತೆ ಮರೆಮಾಚಲು ಸುಳ್ಳು ಹೇಳುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ