ಬೊಮ್ಮನಹಳ್ಳಿ (ಬೆಂಗಳೂರು):ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಇಡೀ ಬೆಡ್ ಬ್ಲಾಕಿಂಗ್ ಹಗರಣದ ದಿಕ್ಕು ತಪ್ಪಿಸುವಲ್ಲಿ ಕಾಂಗ್ರೆಸ್ ಮತ್ತು ಅದರ ಬೆನ್ನಿಗಿರುವ ಎರಡು ಬುದ್ಧಿಜೀವಿಗಳು ಶ್ರಮಿಸುತ್ತಿದ್ದಾರೆ. ಹಾಸಿಗೆ ಹಿಡಿದಿಡುವ ದಂಧೆ ಬಿಬಿಎಂಪಿಯ ಎಲ್ಲಾ ವಾರ್ ರೂಂ ವ್ಯಾಪ್ತಿಯಲ್ಲೂ ನಡೆದಿದೆ. ಕೇವಲ ಏಕ ವ್ಯಕ್ತಿಯ ನಿರ್ದೇಶನದಂತೆ ನಡೆದಿಲ್ಲ. ಇದರಲ್ಲಿ ವ್ಯಾಪಕವಾದ ಜಾಲವಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪರ ವಕಾಲತ್ತು ವಹಿಸಿ ಹೇಳಿಕೆ ನೀಡಿದರು.
ಬೊಮ್ಮನಹಳ್ಳಿ ವ್ಯಾಪ್ತಿಯ ಕೋಡಿ ಚಿಕ್ಕನಹಳ್ಳಿ ರಸ್ತೆಯ ಆರ್.ಎಂ.ಆರ್ ಉದ್ಯಾನವನದಲ್ಲಿ ಎರಡನೇ ಕೋವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಸಂಸದರು, 4,500 ಹಾಸಿಗೆ ವಂಚಿತರ ಸಾವು-ನೋವಿನ ಕಡೆ ಮಾಧ್ಯಮ ಗಮನ ಹರಿಸಲಿ. ಹಾಸಿಗೆ ಬ್ಲಾಕಿಂಗ್ ಸಾಫ್ಟ್ವೇರ್ ಬಳಕೆಯ ಹಿಂದೆ ಇರುವ ವ್ಯವಸ್ಥೆಯನ್ನು ಪ್ರಶ್ನಿಸಲಿ. ಹಗರಣ ಬಯಲಿಗೆಳೆದವರನ್ನೇ ಹಗರಣದಲ್ಲಿ ಸಿಲುಕಿಸಿ ತನಿಖೆಯ ದಾರಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಪ್ರಸ್ತುತ ಸಿಸಿಬಿ ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿರುವುದಲ್ಲದೆ ಹೈಕೋರ್ಟ್ ವಿಶೇಷವಾಗಿ ಈ ಪ್ರಕರಣವನ್ನು ಗಮನಿಸುತ್ತಿದೆ. ಹಗರಣದ ಇನ್ನಷ್ಟು ಮಾಹಿತಿ ಬಯಲಾಗಲಿದೆ ಎಂದರು.