ಬೆಂಗಳೂರು:ಇತ್ತೀಚಿಗೆ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಹೆಸರನ್ನು ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದ ಮುಖ್ಯರಸ್ತೆಗೆ ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ಸಿಎಂ ಮತ್ತು ಡಿಸಿಎಂ ಅವರಿಗೆ ವಿನಂತಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇತ್ತೀಚೆಗಷ್ಟೆ ಜಮ್ಮು- ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಕದನದಲ್ಲಿ ವೀರಮರಣ ಹೊಂದಿದ ಬೆಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಸಾಹಸ, ಶೌರ್ಯ, ಅಪರಿಮಿತ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿ. ರಾಷ್ಟ್ರಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧ ಕ್ಯಾ. ಎಂ ವಿ ಪ್ರಾಂಜಲ್ ಅವರ ಸ್ಮರಣಾರ್ಥ ಮತ್ತು ಅವರಿಗೆ ಗೌರವವನ್ನು ಸೂಚಿಸುವ ನಿಟ್ಟಿನಲ್ಲಿ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದ ಮುಖ್ಯರಸ್ತೆಗೆ, ಕ್ಯಾ.ಎಂ ವಿ ಪ್ರಾಂಜಲ್ ಹೆಸರನ್ನು ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.
ಘಟನೆ ಸಂಭವಿಸಿದ ನಂತರ ಇರುವಂತಹ ಭಾವನಾತ್ಮಕ ಕಾಳಜಿ ಕೆಲ ದಿನಗಳ ನಂತರ ಇತರ ವಿಷಯಗಳ ನಡುವೆ ಮರೆಯುವ ಸಂಭವ ಹೆಚ್ಚಿಗೆ ಇರುವುದರಿಂದ, ಯುವ ಪೀಳಿಗೆಗೆ ಪ್ರಾಂಜಲ್ ಅವರಂತಹ ವೀರಯೋಧರ ಮಾದರಿ, ಸ್ಮರಣೆಯ ಅವಶ್ಯಕತೆ ಇದೆ. ಸರ್ಕಾರವು ಆನೇಕಲ್ನ ಜಿಗಣಿ ಮುಖ್ಯ ರಸ್ತೆಗೆ ಹುತಾತ್ಮ ಕ್ಯಾ ಎಂ ವಿ ಪ್ರಾಂಜಲ್ ಅವರ ಹೆಸರನ್ನು ನಾಮಕರಣಗೊಳಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.