ಬೆಂಗಳೂರು:ಉದ್ಯಾನನಗರಿ ಬೆಂಗಳೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಬಡಾವಣೆಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಸಂಸದ ತೇಜಸ್ವಿ ಸೂರ್ಯ ಬೆಣ್ಣೆ ದೋಸೆ ಸವಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಳೆ ಹಾನಿ ಪರಿಹಾರ ಕಾರ್ಯಕ್ಕಿಳಿಯುವ ಬದಲು ದೋಸೆ ತಿನ್ನುವಂತೆ ಕರೆ ನೀಡಿದ್ದಕ್ಕೆ ಸಂಸದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತೇಜಸ್ವಿ ಸೂರ್ಯ ವಿಡಿಯೋ ವೈರಲ್ ತೇಜಸ್ವಿ ಸೂರ್ಯ ಬೆಣ್ಣೆ ದೋಸಾ ವಿಡಿಯೋ ವೈರಲ್: ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ಮಳೆಗೆ ನಲುಗಿದೆ. ಹೊರವಲಯದ ಹಲವು ಬಡಾವಣೆಗಳು ಮುಳುಗಡೆಯಾಗಿವೆ, ಜನರು ನೆರವಿಗಾಗಿ ಕಾದು ಕುಳಿತಿದ್ದಾರೆ. ಆದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ ಅವರು ಹೋಟೆಲ್ವೊಂದಕ್ಕೆ ತೆರಳಿ ಬೆಣ್ಣೆ ದೋಸೆ ಸವಿದಿದ್ದಾರೆ.
ಜೊತೆಗೆ ಇಲ್ಲಿಗೆ ಬಂದು ದೋಸೆ ಸವಿಯುವಂತೆ ವಿಡಿಯೋದಲ್ಲಿ ಜನರಿಗೆ ಆಹ್ವಾನ ನೀಡಿದ್ದಾರೆ. ಮಳೆ ಮಧ್ಯೆಯೂ ಸಂಸದರ ಈ ವಿಡಿಯೋ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಆದ್ರೆ ಈ ವಿಡಿಯೋ ಯಾವಾಗ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈಗ ವೈರಲ್ ಆಗಿದೆ.
ಸ್ಯಾಂಡಲ್ವುಡ್ ನಟಿ ರಮ್ಯಾ ಕೂಡ ಟ್ವೀಟ್ ಮಾಡಿ ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ಬೆಂಗಳೂರು ಮಳೆ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಸಂಸದ ಮಾತ್ರ ಹೋಟೆಲ್ನಲ್ಲಿ ಮಸಾಲೆ ದೋಸೆ ತಿಂದು ಪ್ರಮೋಟ್ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದು ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದೇನು ?:ಪದ್ಮನಾಭನಗರದಲ್ಲಿನ ಸ್ವಾತಿ ಕಿಚನ್ಗೆ ಬಂದಿದ್ದೇನೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ನೋಡಿದ್ದೆ. ಹಾಗಾಗಿ ಬಂದು ಬೆಣ್ಣೆ ಮಸಾಲೆ ದೋಸೆ ತಿನ್ನುತ್ತಿದ್ದೇನೆ. ಇಲ್ಲಿ ಉಪ್ಪಿಟ್ಟು ಕೂಡ ಚೆನ್ನಾಗಿರುತ್ತೆ. ಬಂದು ನೀವೂ ತಿನ್ನಿ ಎಂದು ತೇಜಸ್ವಿ ಸೂರ್ಯ ಹೇಳಿರುವುದು ವಿಡಿಯೋದಲ್ಲಿದೆ.
ಬಿಜೆಪಿ ಹೇಳಿದ್ದೇನು?ನಿಮ್ಮ ಸಂಸದರು ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದಾರೆ, ದೋಸೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಲ್ಲಿ ನೀವು ಸೇವಾ ಚಟುವಟಿಕೆ ಎಂದೆಲ್ಲಾ ಹೇಳುತ್ತಿದ್ದೀರಲ್ಲ ಎನ್ನುವ ಆಕ್ಷೇಪವನ್ನು ಬಿಜೆಪಿ ನಾಯಕರು ಎದುರಿಸಬೇಕಾಯಿತು. ಆದರೆ, ಇದರ ಬಗ್ಗೆ ಮಾಹಿತಿ ಇಲ್ಲ, ಪರಿಶೀಲಿಸಿ ವಿವರಣೆ ನೀಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಮಜಾಯಿಷಿ ನೀಡಿದರು.
(ಇದನ್ನೂ ಓದಿ: ಜಲಾವೃತವಾದ ಲೇಔಟ್ಗಳು.. ಮನೆ ಖಾಲಿ ಮಾಡಿ ಹೋಟೆಲ್, ಲಾಡ್ಜ್ ಸೇರಿದ ಬೆಂಗಳೂರಿಗರು)