ಬೆಂಗಳೂರು :ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಮನವಿ ಸಲ್ಲಿಸಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ, ಸಕ್ಕರೆ ಕಾರ್ಖಾನೆ ಆರಂಭ ಕುರಿತು ಮಾತುಕತೆ ನಡೆಸಿದರು. ಈ ಹಿಂದಿನ ಭೇಟಿ ವೇಳೆ ಮನವಿಗಳ ಕುರಿತು ನೆನಪಿಸಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಆರಂಭಿಸಿ, ಕಬ್ಬು ಬೆಳೆಗಾರರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮೈಶುಗರ್ ಕಾರ್ಖಾನೆ ಆದಷ್ಟು ಬೇಗ ಶುರು ಮಾಡಬೇಕು. ಮೂರು ನಾಲ್ಕು ತಿಂಗಳ ಒಳಗೆ ಆಗಬೇಕು ಎಂದು ಮನವಿ ಮಾಡಿದ್ದೇವೆ.
ಜೊತೆಗೆ ಜಿಲ್ಲೆಯ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಮನವಿ ಮಾಡಿದ್ದೇವೆ. ಅಕ್ರಮ ಗಣಿಗಾರಿಕೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ನಿಯಂತ್ರಣದಲ್ಲಿದೆ. ಆದರೂ ಅಕ್ರಮ ಗಣಿಗಾರಿಕೆ ಕುರಿತು ಕ್ರಮಕ್ಕೆ ಮನವಿ ಮಾಡಿದ್ದೇನೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.