ಬೆಂಗಳೂರು: ಟಾರ್ಗೆಟ್ ಹಳೆ ಮೈಸೂರು ಭಾಗವಾಗಿ ಚುನಾವಣಾ ಪೂರ್ವದಲ್ಲೇ ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ ನಾಯಕರು ಸತತ ಪ್ರಯತ್ನದ ಬಳಿಕ ಅಂತಿಮವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಸೇರಿ ಮಂಡ್ಯದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸುಮಲತಾರನ್ನು ಸೇರಿಸಿಕೊಳ್ಳುವ ಮೊದಲಿನ ಭಾಗವಾಗಿ ಈ ಆಪರೇಷನ್ ನಡೆದಿದೆ ಎನ್ನಲಾಗುತ್ತಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ, ನಾಗಮಂಗಲದ ರವಿ, ಶ್ರೀರಂಗಪಟ್ಟಣದ ಲಿಂಗರಾಜು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಭಾವುಟ ಮತ್ತು ಶಾಲು ಹೊದಿಸಿ ಸಚಿವ ಅಶ್ವತ್ಥ ನಾರಾಯಣ್, ಕೆ.ಗೋಪಾಲಯ್ಯ, ನಾರಾಯಣ ಗೌಡರು, ಸಿಪಿ ಯೋಗೇಶ್ವರ್, ನಿರ್ಮಲ್ ಕುಮಾರ್ ಸುರಾನ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಅವರು ಮಂಡ್ಯ ನಾಯಕರಿಗೆ ಸ್ವಾಗತ ಕೋರಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆಯಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಹಾಗೂ ಹೊಸ ಸಂಚಲನ ಮೂಡಿಸಿದೆ. ಮಂಡ್ಯದಲ್ಲಿ ಈಗ ಒಬ್ಬರು ಎಂಎಲ್ಎ ಇದ್ದಾರೆ. ಮುಂದೆ 7ಕ್ಕೆ 7 ಶಾಸಕರು ಬಿಜೆಪಿಯಿಂದ ಆಯ್ಕೆ ಆಗುತ್ತಾರೆ.
ಇದನ್ನೂ ಓದಿ:ಅವಕಾಶ ಸಿಕ್ಕಲ್ಲಿ ಇಂದು ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿ ಸಾಧ್ಯತೆ: ಸಿಎಂ ಬೊಮ್ಮಾಯಿ
ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಡುತ್ತಿರುವ ಕೆಲಸದಿಂದ ಇದು ಸಾಧ್ಯವಾಗಲಿದೆ. ನಾರಾಯಣಗೌಡ ಹಾಗೂ ಗೋಪಾಲಯ್ಯರ ಪ್ರಯತ್ನದಿಂದ ಕೆಂಪೇಗೌಡ ಪ್ರತಿಮೆಯ ಮಣ್ಣು ಸಂಗ್ರಹ ರಥಯಾತ್ರೆ ಯಶಸ್ವಿ ಆಗಿದೆ. ಈ ಯಾತ್ರೆಯಿಂದ ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಹಿಂದುತ್ವ ಮತ್ತಷ್ಟು ಜಾಸ್ತಿ ಆಗುತ್ತದೆ ಮುಂದೆಯೂ ಅಲ್ಲಿ ಹಿಂದುತ್ವದ ಆಧಾರದಲ್ಲೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಕ್ಕಡದಲ್ಲಿ ಹೊಡೆದರು: ಸಚಿವ ನಾರಾಯಣಗೌಡ ಮಾತನಾಡಿ, ಇಡೀ ಭಾರತದಲ್ಲೇ ಒಳ್ಳೆಯ ಪಕ್ಷ ಅಂದರೆ ಅದು ಬಿಜೆಪಿ, ಅದಕ್ಕಾಗಿ ನಾನು ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ. ಆಗ ಯಾವ ಕಡೆ ನೋಡಿದರೂ ಯಾರೂ ಕಾಣಿಸುತ್ತಿರಲಿಲ್ಲ, ಮದ್ದೂರು ಸ್ವಾಮಿ ಸೇರಿದಂತೆ ಹಲವರು ನನ್ನ ಜೊತೆ ಬಿಜೆಪಿಗೆ ಬಂದರು. ಒಂದು ಒಂದೂವರೆ ವರ್ಷದಿಂದ ಸಚ್ಚಿದಾನಂದನಿಗೆ ನಾವು ಗಾಳ ಹಾಕುತ್ತಿದ್ದೆವು. ಆದರೆ, ಕೊನೆಗೂ ಅವರು ಪಕ್ಷಕ್ಕೆ ಸೇರ್ಪಡೆಯಾದರು ಎಂದರು.
ಸಿಪಿ ಯೋಗೇಶ್ವರ್ ನಮ್ಮ ಜಿಲ್ಲೆಯವರಲ್ಲ. ಆದರೆ, ನಿಮ್ಮ ನೇತೃತ್ವದಲ್ಲಿ ಹಿಂದೆ ನಾವು ಬಿಜೆಪಿ ಸೇರಿದ್ದೇವೆ. ಮಂಡ್ಯ ಬೇರೆ ಬೇರೆ ಭದ್ರಕೋಟೆಯಾಗಿತ್ತು. ಇವತ್ತು ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ. ಮಂಡ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರೋದು ನಮಗೆ ಖುಷಿ ತರಿಸಿದೆ. ಮಂಡ್ಯದಲ್ಲಿ ಮುಂದೆ 7 ಸೀಟುಗಳನ್ನು ಗೆಲ್ಲುತ್ತೇವೆ. ನಾನು ಇಡೀ ಜಿಲ್ಲೆಯಲ್ಲಿ ಸೇವಕನಾಗಿ ಕಲಸ ಮಾಡುತ್ತೇನೆ ನಾವು ಯಾರು ಕಾಂಗ್ರೆಸ್. ಜೆಡಿಎಸ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಮ್ಮ ಜೊತೆ ಬಂದಿದ್ದು, ನನಗೆ ದೊಡ್ಡ ಖುಷಿ ತಂದಿದೆ.