ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಇಂದೂ ಸಹ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ಆಡಿದ ಮಾತು ಇಂದು ಹೇಳೇ ಇಲ್ಲ ಎಂದು ಹೇಳುವ ವ್ಯಕ್ತಿತ್ವ ಕುಮಾರಸ್ವಾಮಿ ಅವರದ್ದು. ಅವರ ಪ್ರತಿಯೊಂದು ಮಾತೂ ನಕಲಿಯೇ. ಅದಕ್ಕಾಗಿಯೇ ಮಂಡ್ಯ ಚುನಾವಣೆಯಲ್ಲಿ ನಾಲ್ವರು ನಕಲಿ ಸುಮಲತಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ನಾನು ಸಣ್ಣಪುಟ್ಟ ಬೆದರಿಕೆಗೆ ಹೆದರುವ ಗೌಡ್ತಿ ಅಲ್ಲ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೋರಾಡುತ್ತಿದ್ದೇನೆ, ಹೋರಾಟ ಮುಂದುವರಿಸುತ್ತೇನೆ. ಯಾರಿಗೂ ಹೆದರಲ್ಲ ಎಂದಿದ್ದಾರೆ.
ಮುಂದುವರೆದು, ಜೆಡಿಎಸ್ಗೆ ಸಂಸದ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಸ್ಪರ್ಧಿಸಿ ಸೋತಿರುವ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಲಿ, ಎರಡು ಸಾರಿ ಸಿಎಂ ಆಗಿ ಅಧಿಕಾರ ನಡೆಸಿದ ಕುಮಾರಸ್ವಾಮಿ ಆಗಲಿ, ಜೆಡಿಎಸ್ನಲ್ಲಿ ಪ್ರಬಲ ನಾಯಕರಲ್ಲ ಎಂದು ಹೇಳಿದರು.