ಬೆಂಗಳೂರು:ಐಎಂಎ ಜ್ಯುವೆಲರ್ಸ್ ಹಾಗೂ ಎಐಎಂಎಂಎಸ್ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಸದರಾದ ಜಿ.ಎಂ.ಸಿದ್ದೇಶ್ವರ್, ಪಿ.ಸಿ.ಮೋಹನ್, ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಅವರೊಂದಿಗೆ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ, ಐಎಂಎ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅವ್ಯವಹಾರವನ್ನು ಬಯಲಿಗೆಳೆಯಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಕಳೆದ ವಾರ ಎರಡು ಕಂಪನಿಗಳಿಂದ ದೊಡ್ಡ ವಂಚನೆ ರಾಜ್ಯದಲ್ಲಿ ನಡೆದಿದೆ. ಬಡ ಜನರಿಂದ ಹೂಡಿಕೆ ಮಾಡಿದ ಹಣವನ್ನು ವಂಚಿಸಲಾಗಿದೆ. 30 ಸಾವಿರ ಹೂಡಿಕೆದಾರರ 6 ಸಾವಿರ ಕೋಟಿ ಹಣವನ್ನು ಲಪಟಾಯಿಸಲಾಗಿದೆ. ಐಎಂಎ ಜ್ಯುವೆಲರ್ಸ್ನಲ್ಲಿನ ಅಸಮರ್ಪಕ ಆರ್ಥಿಕ ವ್ಯವಹಾರದಿಂದ ಅನುಮಾನಗೊಂಡ ರಿಸರ್ವ್ ಬ್ಯಾಂಕ್ ಐಎಂಎಗೆ ನೋಟಿಸ್ ನೀಡಿತ್ತು. ಆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಏನನ್ನೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿತ್ತು. ಇದರ ಪರಿಣಾಮವಾಗಿ ಇದೀಗ ಅಲ್ಪಸಂಖ್ಯಾತ ಸಮುದಾಯದ ಜನರು ಹಣ ಕಳೆದುಕೊಂಡು ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ರೋಶನ್ ಬೇಗ್, ರಾಮಲಿಂಗಾರೆಡ್ಡಿ, ಹಾಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಜೊತೆ ಊಟ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೆಲ್ಲಾ ನೋಡಿದರೆ ಆರೋಪಿ ರಾಜಕೀಯ ಪ್ರಭಾವ ಬಳಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ.
ಸಾವಿರಾರು ಜನ ದೂರು ನೀಡಿದ ಹಿನ್ನೆಲೆ ಐಎಂಎ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇದು ಕೇವಲ ಕಣ್ಣೊರೆಸುವ ತಂತ್ರ ಮಾತ್ರ. ವಂಚನೆ ನಡೆಯುವುದನ್ನು ನೋಡುತ್ತಾ ಕುಳಿತು ಪ್ರಮುಖ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದವರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ. ಹಾಗಾಗಿ ಎರಡೂ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಮತ್ತು ಮನ್ಸೂರ್ ಖಾನ್ಗೆ ಉಗ್ರಗಾಮಿ ಸಂಘಟನೆಗಳ ಜೊತೆ ನಂಟಿದ್ದು, ಈ ಹಣ ಉಗ್ರ ಚಟುವಟಿಕೆಗಳಿಗೆ ಬಳಕೆಯಾಗಿರಬಹುದು. ಹಾಗಾಗಿ ಅಗತ್ಯ ಕ್ರಮ ತೆಗೆದುಕೊಂಡು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸತ್ಯವನ್ನು ಬಯಲಿಗೆಳೆಯಬೇಕೆಂದು ಮನವಿ ಮಾಡಿದ್ದಾರೆ.