ಬೆಂಗಳೂರು: ನಾನು ಅಧಿಕಾರ ತ್ಯಾಗ ಮಾಡಿ ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅನ್ಯಾಯವಾಗಿದೆ. ಆದರೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸಚಿವ ಸ್ಥಾನ ಸಿಗದಿರುವುದಕ್ಕೆ ಶಾಸಕ ಎಂ ಪಿ ರೇಣುಕಾಚಾರ್ಯ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾವೆಲ್ಲ ಸಿಂಹದ ಮರಿಗಳು. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್‌ವೈ. ಸದ್ಯಕ್ಕೆ ಬೊಮ್ಮಾಯಿ ಅಧಿಕಾರ ಗಟ್ಟಿಯಾಗಿದೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಯಾರು ಅಸಮಾಧಾನ ಹೊಂದಿಲ್ಲ. ಕೆಲವರಿಗೆ ಎರಡ್ಮೂರು ಖಾತೆಗಳಿದೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು.
ನನಗೆ ಮಾತ್ರ ಅವಕಾಶ ಕೊಡಿ ಅಂತಾ ಕೇಳ್ತಿಲ್ಲ. 6 ಖಾತೆಗಳು ಖಾಲಿ ಇದೆ ಅವರಿಗೆ ಸಚಿವ ಸ್ಥಾನ ನೀಡಬೇಕು, ಸಚಿವ ಸ್ಥಾನ ವಂಚಿತ ರೇಣುಕಾಚಾರ್ಯ ಅಂತ ಟೀಕೆ ಮಾಡಿದರೂ ನಾನು ವಿಚಲಿತನಾಗಿಲ್ಲ. ಕಳೆದ ವಾರ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಾನು ತ್ಯಾಗ ಮಾಡಿದ್ದೇನೆ, ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ವಂಚನೆಯಾಗಿದೆ, ಅನ್ಯಾಯ ಆಗಿದೆ ಎಂದರು.
ಇದನ್ನೂ ಓದಿ:ಸಂಪುಟ ವಿಸ್ತರಣೆ ವಿಳಂಬಕ್ಕೆ ಶಾಸಕ ರೇಣುಕಾಚಾರ್ಯ ಅಸಮಾಧಾನ
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ, ಕೊಟ್ಟಿಲ್ಲ ಹಾಗಂತ ನಾನು ಬಂಡಾಯ ಎದ್ದಿದ್ನಾ?, ಬಿಎಸ್‌ವೈ ವಿರುದ್ಧ ಮಾತನಾಡಿದ್ನಾ?. ಸಂಘಟನೆ ಮತ್ತು ಪಕ್ಷ ತಾಯಿ ಸಮಾನ. ನಾನು ನಮ್ಮ ನಾಯಕರ ಮುಂದೆ ಹೇಳಿಕೊಂಡಿದ್ದೇನೆ. ಆದರೆ ನನಗೆ ಅಸಮಾಧಾನವಿಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದರು.
ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನತೆಯೇ ನನ್ನ ದೇವರು. ನನಗೆ ಯಾವುದೇ ಅಸಮಾಧಾನ ಇಲ್ಲ. ಕೋವಿಡ್ ಸಮಯದಲ್ಲಿ, ನೆರೆ ಸಮಯದಲ್ಲಿ ನಾನು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದು ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಚಿವನಾಗಿ ಕ್ಷೇತ್ರವನ್ನು ಕಳೆದುಕೊಂಡಿದ್ದೆ, ಶಾಸಕನಾಗಿಯೇ ಮುಂದುವರಿಯುವೆ: ರೇಣುಕಾಚಾರ್ಯ
ನಾನು ಹಿಂದೆ ಸಚಿವ ಸ್ಥಾನ ಕೇಳಿದ್ದು ನಿಜ. ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನ ಕೇಳಿದ್ದೆ. ಆದರೆ, ಎಲ್ಲೋ ಒಂದು ಕಡೆ ನೋವು ಇದೆ. ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ. ಸಚಿವರ ಕಾರ್ಯವೈಖರಿ ಬಗ್ಗೆ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲೇ ಚಾಟಿ ಬೀಸಿದ್ದೇನೆ. ಈಗ ಚುನಾವಣೆ ಹತ್ತಿರ ಇರುವಾಗ ಹೇಳಿ ಪಕ್ಷಕ್ಕೆ ಡ್ಯಾಮೇಜ್ ಮಾಡಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ಮಾಡಲ್ಲ ಎಂದರು.