ಕರ್ನಾಟಕ

karnataka

ETV Bharat / state

ಸಿಎಂ ವಿರುದ್ಧದ ಹೇಳಿಕೆ ವಾಪಸ್ ಪಡೆಯಿರಿ: ವಾಟಾಳ್​​​ಗೆ ರೇಣುಕಾಚಾರ್ಯ ಎಚ್ಚರಿಕೆ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ವಯಸ್ಸು, ಅವರಿಗಿರುವ ರಾಜಕೀಯ ಅನುಭವ ಅಪಾರ. ಅವರಿಗೆ ನೀತಿಪಾಠ ಹೇಳಲು ಹೊರಟಿರುವ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ರೀತಿ ನೀತಿ ಸರಿಯಿಲ್ಲವೆಂದು ಯಡಿಯೂರಪ್ಪರವರ ವಿರುದ್ಧ ವಾಟಾಳ್ ನಾಗರಾಜ್ ಬಳಸಿರುವ ಪದ ಅಕ್ಷಮ್ಯವಾಗಿದೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

mp renukacharya
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

By

Published : Nov 22, 2020, 1:42 PM IST

Updated : Nov 22, 2020, 2:47 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರವರ ವಿರುದ್ಧ ವಾಟಾಳ್ ನಾಗರಾಜ್ ಬಳಸಿರುವ ಪದ ಅಕ್ಷಮ್ಯವಾಗಿದ್ದು, ಕೂಡಲೇ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಜೊತೆಗೆ ಬಂದ್ ನಿರ್ಧಾರವನ್ನು ಕೈಬಿಡಬೇಕು, ಒಂದು ವೇಳೆ ಬಂದ್ ನಡೆಸಿ ಜನಸಾಮಾನ್ಯರಿಗೆ ತೊಂದರೆ ಆದಲ್ಲಿ ಅದಕ್ಕೆ ನೀವೇ ಹೊಣೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಟಾಳ್ ನಾಗರಾಜ್​​ಗೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ಕರ್ನಾಟಕ ಬಂದ್​ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಯತ್ನಾಳ್ ಸರಿಯಾಗಿಯೇ ಹೇಳಿದ್ದಾರೆ. ಯಡಿಯೂರಪ್ಪನವರ ವಯಸ್ಸು, ಅವರಿಗಿರುವ ರಾಜಕೀಯ ಅನುಭವ ಅಪಾರ. ಅವರಿಗೆ ನೀತಿಪಾಠ ಹೇಳಲು ಹೊರಟಿರುವ ವಾಟಾಳ್ ನಾಗರಾಜ್ ಎಷ್ಟು ಬಾರಿ ಜನರಿಂದ ಆಯ್ಕೆಯಾಗಿದ್ದಾರೆ. ನಿಮಗಷ್ಟೇ ಕನ್ನಡದ ಬಗ್ಗೆ ಅಭಿಮಾನ ಇದೆಯಾ? ನೀವು ಇಲ್ಲಿ ಹುಟ್ಟು ಬೆಳದಿರಬಹುದು, ಆದರೆ ನಾವು ಅಚ್ಚ ಕನ್ನಡಿಗರು ಎಂದರು.

ಮುಖ್ಯಮಂತ್ರಿಗಳ ಬಗ್ಗೆ ನೀವು ಬಳಸಿದ ಪದಗಳು ಎಂತದ್ದು? ನಿಮ್ಮ ನಾಲಿಗೆ ಮೇಲೆ ಹಿಡಿತ ಇರಬೇಕು. ಕನ್ನಡ ಭಾಷೆಯಲ್ಲಿ ಎಂತೆಂತಹ ಶಬ್ಧಗಳಿವೆ. ಗೌರವಯುತವಾದ ಶಬ್ಧಗಳನ್ನು ಬಳಸುವ ಬದಲಾಗಿ ಅವಿವೇಕಿ ಪದ ಬಳಕೆ ಮಾಡಿದ್ದೀರಿ. ಯಡಿಯೂರಪ್ಪರವರ ವಯಸ್ಸು, ಅನುಭವ, ಅವರಿಗಿರುವ ಕನ್ನಡದ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಹಕ್ಕು ನಿಮಗಿಲ್ಲ. ಇನ್ನೊಮ್ಮೆ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ನಾನು ನನ್ನ ಧಾಟಿಯಲ್ಲಿ, ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಕೆ ಕೊಟ್ಟರು.

ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯೋತ್ಸವದ ಹಿಂದಿನ ದಿನ ರಾತ್ರಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡದಿದ್ದಲ್ಲಿ ಮಹಾತ್ಮ ಗಾಂಧಿಯವರ ಸಮಾಧಿ ಜಾಗದಲ್ಲಿ ಸತ್ಯಾಗ್ರಹ ಮಾಡುವುದಾಗಿ ಯಡಿಯೂರಪ್ಪನವರು ಹೇಳಿದ್ದರು. ಈ ಹೋರಾಟದ ಬೆದರಿಕೆಗೆ ಮಣಿದ ಸರ್ಕಾರ, ಒಂದೇ ಒಂದು ಫೋನ್ ಕರೆ ಪರಿಣಾಮ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸಿಕೊಟ್ಟಿತ್ತು. ಅಲ್ಲದೇ, ಯಡಿಯೂರಪ್ಪನವರು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದವರಿಗೆ ನೀವು ನೀತಿಪಾಠ ಹೇಳುತ್ತಿದ್ದೀರಿ. ಸಿದ್ದರಾಮಯ್ಯ ಸರ್ಕಾರ ಮತಾಂಧ ಟಿಪ್ಪು ಜಯಂತಿ ಮಾಡುತ್ತಿದ್ದಾಗ ನೀವು ಎಲ್ಲಿ ಹೋಗಿದ್ರಿ? ಎಂದು ಪ್ರಶ್ನಿಸಿದರು. ಜನರ ಸಂಕಷ್ಟ ಪರಿಹರಿಸುವುದು ಮುಖ್ಯವೇ ಹೊರತು, ಬಂದ್ ಮಾಡುವುದು ಮುಖ್ಯವಲ್ಲ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ. ಬಂದ್ ಯಾಕೆ ಬೇಕು? ಅಂತಹ ತುರ್ತು ವಿಷಯ ಏನಿದೆ? ಸಂಘಟನೆಗಳು ಜನರಿಗೆ ಮಾರ್ಗದರ್ಶನ ಮಾಡಬೇಕೇ ವಿನಃ ಬಂದ್​​ಗೆ ಕರೆ ಕೊಟ್ಟು ಪ್ರಚೋದನೆ ನೀಡುವುದು ಸರಿಯಲ್ಲ ಎಂದರು.

ಯತ್ನಾಳ್ ಬಗ್ಗೆ ಹೇಗೆಬೇಕೋ ಹಾಗೆ ಮಾತನಾಡುತ್ತಿದ್ದೀರಿ. ನಾನು ಕೂಡ ಯತ್ನಾಳ್​ ಬಗ್ಗೆ ಟೀಕೆ ಮಾಡಿದ್ದೇನೆ. ಆದರೆ ಈಗ ಅವರ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಮರಾಠ ಜನರ ಅಭಿವೃದ್ಧಿಗೆ ಈ ನಿರ್ಧಾರ ಮಾಡಿದ್ದೇವೆ. ಬೆಳಗಾವಿ ಮತ್ತು ಕಾರವಾರದ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಹೇಳಿಕೆ ಕೊಟ್ಟ ವೇಳೆ ನಮ್ಮ ಮುಖ್ಯಮಂತ್ರಿ ಮತ್ತು ನಮ್ಮ ಸರ್ಕಾರ ಎಲ್ಲರೂ ಒಟ್ಟಾಗಿ ವಿರೋಧ ಮಾಡಿದ್ದೇವೆ ಎಂದರು.

ಇಲ್ಲಿನ ಮರಾಠಿಗರು ಕೇವಲ ಮರಾಠಿ ಭಾಷೆಯನ್ನೇ ಮಾತನಾಡುವುದಿಲ್ಲ. ನಮ್ಮ ಜೊತೆ ಹುಟ್ಟು ಬೆಳೆದಿದ್ದಾರೆ. ಅವರು ಇಂದಿಗೂ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ. ನಿಗಮ ಮಾಡಿರೋದು ಸಮಾಜದ ಅಭಿವೃದ್ಧಿ, ಶಿಕ್ಷಣ, ಮೂಲಭೂತ ಸೌಕರ್ಯ ಕಲ್ಪಿಸಲು ಮಾತ್ರ. ಸ್ವಾಭಿಮಾನ, ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ನೀವು ಹೋರಾಟ ಮಾಡಿ. ಆಗ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ವಿನಾಕಾರಣ ರಸ್ತೆ ಬೀದಿಯಲ್ಲಿ ಹೋರಾಟ ಮಾಡಿದರೆ ಹೋರಾಟಕ್ಕೆ ಅರ್ಥವಿರುವುದಿಲ್ಲ. ಇಂದು ಸಾಮಾನ್ಯ ಜನರು ಬಂದ್​​ಗೆ ಸಂಪೂರ್ಣ ವಿರೋಧ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ರು.

ಜನರಿಗೆ ಬಂದ್​​ನಿಂದ ಸಂಕಷ್ಟ ಎದುರಾದರೆ ನೀವೇ ಹೊಣೆಯಾಗುತ್ತೀರಿ. ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಇದನ್ನು ತಿಳಿಸಿದ್ದಾರೆ. ನಾಳೆ ಮತ್ತೊಮ್ಮೆ ಪರಿಶೀಲಿಸಿ ಹೋರಾಟದ ಬದಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಲಹೆ ಕೊಡಿ. ಸಲಹೆ ಕೊಡುವ ಬದಲಾಗಿ ಧಮ್ಕಿ ಹಾಕುವುದು ಸರಿಯಲ್ಲ ಎಂದು ತಿಳಿಸಿದರು.

Last Updated : Nov 22, 2020, 2:47 PM IST

ABOUT THE AUTHOR

...view details