ಬೆಂಗಳೂರು: ಯಾವ ಮುಖ ಇಟ್ಟುಕೊಂಡು ನಾನು ಬಿಜೆಪಿ ಕಚೇರಿಗೆ ಹೋಗಲಿ, ನನಗೆ ನೀಡಿರುವ ಶೋಕಾಸ್ ನೋಟಿಸ್ ವಾಪಸ್ ಪಡೆಯುವವರೆಗೂ ನಾನು ಬಿಜೆಪಿ ಕಚೇರಿಗೆ ಭೇಟಿ ನೀಡಲ್ಲ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಇಂದಿನ ಸಭೆಗೆ ಗೈರಾಗಿದ್ದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ನನಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಅದನ್ನ ವಾಪಸ್ ಪಡೆಯುವವರೆಗೆ ಬಿಜೆಪಿ ಸಭೆಗೆ ಬರಲ್ಲ, ನೋಟಿಸ್ಗೆ ಉತ್ತರವನ್ನು ಕೊಡಲ್ಲ. ಬೇಷರತ್ ಆಗಿ ನೋಟಿಸ್ ವಾಪಸ್ ಪಡೆಯಬೇಕು, ಇಲ್ಲದೇ ಇದ್ದಲ್ಲಿ ನಾನು ಯಾವ ಮುಖ ಇಟ್ಟುಕೊಂಡು ಪಕ್ಷದ ಕಚೇರಿಗೆ ಹೋಗಲಿ ಎಂದಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಪಕ್ಷದ ಸೋಲಿನ ಕುರಿತು ಮಾತನಾಡಿದ್ದ ರೇಣುಕಾಚಾರ್ಯ ಹೊಂದಾಣಿಕೆ ರಾಜಕಾರಣದ ಕುರಿತು ಬಹಿರಂಗವಾಗಿ ಆಕ್ಷೇಪ ಎತ್ತಿದ್ದರು. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದನ್ನೂ ಪ್ರಶ್ನಿಸಿದ್ದರು. ಈ ವೇಳೆ ರೇಣುಕಾಚಾರ್ಯಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿತ್ತು.
ನಾನು ಬಿಜೆಪಿ ಬಿಡಲ್ಲ:ನಾನು ಬಿಜೆಪಿ ಬಿಡೋದಿಲ್ಲಾ, ಪಕ್ಷದಲ್ಲೇ ಇದ್ದೇನೆ ನಾನು ಯಾವುದನ್ನೂ ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗೆ ಹೋಗಿಲ್ಲ, ನನಗೆ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೇ ನಾನು ಹೋಗಿಲ್ಲ. ನಾನು ಏನು ಹೇಳಬೇಕೊ ಅದನ್ನ ಹೇಳಿದ್ದೇನೆ, ಇದರಿಂದ ನನಗೆ ವಯ್ಯಕ್ತಿಕವಾಗಿಯೂ ಯಾವುದೇ ಲಾಭವೂ ಇಲ್ಲ, ನಷ್ಟವೂ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷದಲ್ಲಿ ಇರುವುದನ್ನು ನೇರವಾಗಿ ಹೇಳಿದ್ದೇನೆ ಅಷ್ಟೇ ಎಂದು ಪಕ್ಷದ ನಾಯಕರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.