ಬೆಂಗಳೂರು: ಕೋಲಾರ ಲೋಕಸಭಾ ಸದಸ್ಯ ಮುನಿಸ್ವಾಮಿ, ರೈಲ್ವೇ ಮಂಡಳಿಯ ಅಧಿಕಾರಿಗಳೊಂದಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸಿ ವಿವಿಧ ರೈಲ್ವೇ ಮಾರ್ಗಗಳ ಪರಿಶೀಲನೆ ಮಾಡಿ ಕುಂದುಕೊರತೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿದರು.
ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಕೋಲಾರ ಲೋಕಸಭಾ ಸದಸ್ಯ ಮುನಿಸ್ವಾಮಿ ಭೇಟಿ, ಪರಿಶೀಲನೆ ಐಟಿಬಿಟಿ ತಾಣವಾದ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಾರೆ. ಈ ನಿಲ್ದಾಣದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಮತ್ತು ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ರೈಲ್ವೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಇದೇ ವೇಳೆ ಇಲ್ಲಿನ ರೈಲ್ವೆ ಅಂಡರ್ ಬ್ರಿಡ್ಜ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸುಮಾರು 90% ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಸರ್ವೀಸ್ ರಸ್ತೆ ಮತ್ತು ಸ್ಕೈವಾಕ್ ನಿರ್ಮಿಸಲು ರೈಲ್ವೆ ಅಧಿಕಾರಿಗಳಿಗೆ ಹೇಳಿದ್ರು.
ಈ ಸಂದರ್ಭದಲ್ಲಿ ಸ್ಥಳೀಯರು ಚಿಕ್ಕ ರೈಲ್ವೆ ಗೇಟ್ ಬಂದ್ ಮಾಡಲಾಗಿದ್ದು, ಅದನ್ನು ಪುನಃ ಪ್ರಾರಂಭಿಸಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಸಾರ್ವಜನಿಕ ಮನವಿಯನ್ನು ಅಧಿಕಾರಿಗಳು ಒಪ್ಪಲಿಲ್ಲ. ಇದರಿಂದ ಸ್ಥಳೀಯರು ಅಧಿಕಾರಿಗಳ ವಿರುದ್ದ ಸಿಟ್ಟಿಗೆದ್ದು ಕೆಲಕಾಲ ಅಧಿಕಾರಿಗಳಿರುವ ರೈಲು ತಡೆದು ರೈಲ್ವೆ ಗೇಟ್ ಹಾಗೂ ಅಂಡರ್ ಪಾಸ್ ನಿಧಾನಗತಿಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ರೈಲು ಹಳಿಗಳ ಮೇಲೆ ನಿಂತು ಪ್ರತಿಭಟನೆ ಮಾಡಿದರು.
ಈ ವೇಳೆ ಮುನಿಸ್ವಾಮಿ ಮಾತನಾಡಿ, ವೈಟ್‍ಫೀಲ್ಡ್, ಯಲಹಂಕ ,ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಮಾರ್ಗವಾಗಿ ಅ.31 ರಿಂದ ನೂತನ ರೈಲು ಸಂಚಾರ ಪ್ರಾರಂಭವಾಗಲಿದೆ. ಈ ಮಾರ್ಗವಾಗಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ 2 ಬಾರಿ ರೈಲು ಸಂಚಾರ ನಡೆಸಲಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದ್ದರಿಂದ ಇಂದು ವೈಟ್‍ಫೀಲ್ಡ್‌ನಿಂದ ಕೋಲಾರ ಜಿಲ್ಲೆಯ ವಿವಿಧ ರೈಲ್ವೇ ಮಾರ್ಗಗಳ ಪರಿಶೀಲನೆ ಮಾಡಿ ಸಾರ್ವಜನಿಕರ ಕುಂದುಕೊರತೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸುತ್ತಿದ್ದೇವೆ ಎಂದರು.