ಬೆಂಗಳೂರು:ಅಡುಗೆ ಎಣ್ಣೆಯ ಬೆಲೆ ಏರಿಕೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಡಿ.ಕೆ.ಸುರೇಶ್ ಇದೀಗ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಲಾಕ್‌ಡೌನ್ ಸಮಯದಲ್ಲಿ, ಡಿಸೇಲ್-ಪೇಟ್ರೋಲ್‌ನ ಏರಿಕೆ ಮತ್ತು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ಪ್ರತಿನಿತ್ಯ ಬಳಸುವ ಆಡುಗೆ ಎಣ್ಣೆಯ ದರದ ದುಪ್ಪಟ್ಟು ಆಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅನರ್ಹರು ಬಿಪಿಎಲ್ ಕಾರ್ಡ್ ಹಿಂತಿರುಗಿಸಲು ಜೂನ್ 30 ಅಂತಿಮ ಗಡುವು
ಪ್ರಸ್ತುತ ಅಡುಗೆ ಎಣ್ಣೆ ದರ ಲೀಟರ್‌ಗೆ 150 ರೂ. ರಿಂದ 180ರೂ. ವರೆಗೆ ಮತ್ತು ಬ್ರಾಂಡೆಡ್ ದರ 230 ರೂ.ವರೆಗೂ ಇದೆ. ಕೊರೊನಾ, ಲಾಕ್‌ಡೌನ್‌ನ ಇಂತಹ ಸಂದರ್ಭದಲ್ಲಿ ಕೆಲಸವಿಲ್ಲದೇ ಪ್ರತಿನಿತ್ಯ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರು ಮತ್ತು ಜನಸಾಮಾನ್ಯರ ಪಾಲಿಗೆ ಅಡುಗೆ ಎಣ್ಣೆಯ ದರ ಏರಿಕೆ ದುಬಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಕೋವಿಡ್ ಪರಿಸ್ಥಿತಿ ವಿಶ್ಲೇಷಿಸಿ ಪ್ರಧಾನಿಗೆ ಪತ್ರ ಬರೆದ ಸಂಸದ ಡಿಕೆ ಸುರೇಶ್
ಜನಸಾಮಾನ್ಯರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಅಡುಗೆ ಎಣ್ಣೆಯ ದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದು ಅತ್ಯಗತ್ಯವಾಗಿರುತ್ತದೆ. ಅಡುಗೆ ಎಣ್ಣೆಯ ದರದ ನಿಯಂತ್ರಣಕ್ಕೆ ಆಮದು ಸುಂಕ ಮತ್ತು ಜಿಎಸ್ಟಿ ಕಡಿಮೆ ಮಾಡಬೇಕು. ಇದರ ಜತೆಗೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಿ ಬೆಲೆ ಏರಿಕೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ತಮ್ಮನ್ನು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.