ಬೆಂಗಳೂರು: ಆರ್.ಆರ್.ನಗರದಲ್ಲಿ ಯಾರೇ ಅಭ್ಯರ್ಥಿಯಾದರೂ ಡಿ.ಕೆ.ಸುರೇಶ್ ಅವರೇ ಇಲ್ಲಿ ಅಭ್ಯರ್ಥಿ ಅಂದುಕೊಳ್ಳಿ ಎಂದು ಕೈ ಕಾರ್ಯಕರ್ತರಿಗೆ ಸಂಸದ ಡಿ.ಕೆ.ಸುರೇಶ್ ಕರೆ ನೀಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಆರ್.ಆರ್.ನಗರ ಕ್ಷೇತ್ರದ ಮುಖಂಡರ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ತಿಳಿಸಿದ್ದಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡ್ತೇವೆ ಅಂದಿದ್ದಾರೆ. ಸಮರ್ಥ ಅಭ್ಯರ್ಥಿ ಕೊಡಿ ಎಂದು ಕೇಳಿದ್ದಾರೆ. ಮಾಗಡಿ ಬಾಲಕೃಷ್ಣ, ರಕ್ಷಾ ರಾಮಯ್ಯ ಮತ್ತು ಕೃಷ್ಣಮೂರ್ತಿ, ಪ್ರಿಯಕೃಷ್ಣಾ, ರಾಜ್ ಕುಮಾರ್ ಸೇರಿದಂತೆ ಅನೇಕರ ಹೆಸರು ಕೇಳಿ ಬಂದಿವೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವವರನ್ನು ಆಯ್ಕೆ ಮಾಡ್ತೇವೆ ಎಂದರು.
ಇನ್ನು ನಾಲ್ಕು ದಿನಗಳಲ್ಲಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುತ್ತೇವೆ. ಕುಸುಮಾ ರವಿ ಹೆಸರು ಚರ್ಚೆಯಲ್ಲಿದೆ. ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ನಮ್ಮ ಕಾರ್ಯಕರ್ತರು ಪ್ರತಿ ಬೂತ್ನಲ್ಲಿದ್ದಾರೆ. ಕೆಲವು ಸಮಸ್ಯೆ, ಬೆದರಿಕೆ ಇರುವ ಬಗ್ಗೆ ನನ್ನ ಗಮಕ್ಕೆ ತಂದು ಎಲ್ಲವನ್ನೂ ತಿಳಿಸಿದ್ದಾರೆ ಎಂದರು.
ಮುನಿರತ್ನಂ ನನ್ನ ಸಂಪರ್ಕಕಕ್ಕೆ ಬಂದಿಲ್ಲ:ಮುನಿರತ್ನಂಗೆಬಿಜೆಪಿಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ಗೆ ಬಂದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುನಿರತ್ನಂ ನನ್ನ ಸಂಪರ್ಕಕ್ಕೆ ಬಂದಿಲ್ಲ. ಅವರನ್ನು ಸೇರಿಸಿಕೊಳ್ಳೋದರ ಬಗ್ಗೆ ಪಕ್ಷದ ನಾಯಕರು ಹಾಗೂ ಕ್ಷೇತ್ರದ ಮತದಾರರು ನಿರ್ಧಾರ ಮಾಡ್ತಾರೆ ಎಂದರು. ಮುನಿರತ್ನಂ ನನಗೆ ಒಳ್ಳೆಯ ಸ್ನೇಹಿತ. ರಾಜಕೀಯವಾಗಿ ಮಾತ್ರ ನನಗೆ ಶತ್ರು. ಸ್ನೇಹಿತ ಅಲ್ಲ ಅಂತ ಹೇಳೋಕೆ ಆಗುತ್ತಾ?. ಅವರು ನನ್ನ ಉತ್ತಮ ಸ್ನೇಹಿತ, ಆಗಲೂ ಈಗಲೂ ಅಷ್ಟೇ ಎಂದರು.
ಅದು ಮುಗಿದ ಅಧ್ಯಾಯ:ಕಾಂಗ್ರೆಸ್ ಸಹವಾಸ ಮಾಡಿ ತಪ್ಪು ಮಾಡಿದೆ. ಪ್ರಧಾನಿ ಐದು ವರ್ಷ ಸಿಎಂ ಆಗುವ ಆಫರ್ ಕೊಟ್ಟಿದ್ರು ಅಂತ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಮುಗಿದ ಅಧ್ಯಾಯ. ಸರ್ಕಾರ ರಚನೆ ಆಗಿ ಈಗ ಮತ್ತೊಂದು ಸರ್ಕಾರ ಬಂದಿದೆ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಮ್ಮ ನಾಯಕರು ಮಾತನಾಡ್ತಾರೆ. ಈಗ ಏನಿದ್ರು ಎರಡು ಕ್ಷೇತ್ರದ ಉಪಚುನಾವಣೆ. ನಮ್ಮ ಪರ ನಾವು ಕೆಲಸ ಮಾಡ್ತೀವಿ. ಅವರ ಅಭ್ಯರ್ಥಿ ಪರ ಅವರು ಕೆಲಸ ಮಾಡ್ಲಿ. ಮುಗಿದ ವಿಚಾರದ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದರು.