ನವದೆಹಲಿ/ ಬೆಂಗಳೂರು :ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿದ ಬಜೆಟ್ ಎಂಬುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಭಾಷಣಗಳಲ್ಲಿ ಹೇಳುವ ಸರ್ಕಾರದ ಸಾಧನೆಯ ಪಟ್ಟಿಯನ್ನು ಎಲ್ಲಾ ಸಂಸದರನ್ನು ಕೂರಿಸಿಕೊಂಡು ಒಪ್ಪಿಸುವಂತಿದೆ ಎಂದು ಸಂಸದ ಡಿ ಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಮಾರು 39 ಲಕ್ಷ ಕೋಟಿ ರೂ. ಬಜೆಟ್ನಲ್ಲಿ ಕೋವಿಡ್ ಪಿಡುಗಿನ ಸಮಯದಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ಬಿಟ್ಟರೆ, ಉಳಿದಂತೆ ಸಂಕಷ್ಟಕ್ಕೆ ಸಿಲುಕಿದವರಿಗೆ ಯಾವುದೇ ರೀತಿಯ ಭರವಸೆ ಮೂಡಿಸುವ ಅಂಶಗಳಿಲ್ಲ.
ಈ ಬಜೆಟ್ನಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ. ಕಾರಣ ಮೋದಿ ಅವರು ಯಾರೂ ತಿನ್ನಬೇಡಿ ಎಂದು ಹೇಳಿರುವುದರಿಂದ ಇವರು ಜನಸಾಮಾನ್ಯರೂ ಏನನ್ನೂ ತಿನ್ನದಂತೆ ಮಾಡಲು ಹೊರಟಿದ್ದಾರೆ ಎಂದರು. ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೋವಿಡ್ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಈ ಬಜೆಟ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.
ಬಹಳ ಅಚ್ಚರಿ ವಿಚಾರ ಎಂದರೆ ಕೇಂದ್ರ ಸರ್ಕಾರಕ್ಕೆ ಜನವರಿ ತಿಂಗಳಲ್ಲಿ 1.40 ಲಕ್ಷ ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಿದ್ದಾರೆ. ಇವರು ಜಿಎಸ್ಟಿಯಲ್ಲಿ ಶೇ.18 ರಿಂದ 28ರಷ್ಟು ತೆರಿಗೆ ವಿಧಿಸಿದರೆ ಆದಾಯ ಬಂದೇ ಬರುತ್ತದೆ. ಆದರೆ, ಬಡವರು, ಮಧ್ಯಮವರ್ಗದವರ ತೆರಿಗೆ ಕಡಿಮೆ ಮಾಡುವ ಬಗ್ಗೆ ಪ್ರಸ್ತಾಪವೇ ಇಲ್ಲ. ಇದು ಸರ್ಕಾರ ಎಲ್ಲರಿಂದಲೂ ತೆರಿಗೆ ವಸೂಲು ಮಾಡುವುದರಲ್ಲಿ ನಿರತವಾಗಿದೆ. ಯಾರೂ ಅಡ್ಡಿಪಡಿಸಬೇಡಿ ಎಂದು ಹೇಳುವಂತಿದೆ ಎಂದರು.
ಕೇಂದ್ರ ಸರ್ಕಾರ ಬಜೆಟ್ನಲ್ಲಿ ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ನೀಡುವುದಾಗಿ ಹೇಳಿದೆ. ಬಡವರಿಗೆ ಮನೆ ನೀಡುತ್ತೇವೆ ಎಂದಿದೆ. ಆದರೆ, ಅದನ್ನು ಕಟ್ಟಲು ಬೇಕಾಗಿರುವ ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಿಲ್ಲ. ಆಯವ್ಯಯದಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ರೈತರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸರ್ಕಾರ ಬೆಂಬಲ ಬೆಲೆಯನ್ನು ಕಳೆದ ವರ್ಷದಷ್ಟೇ ಮುಂದುವರಿಸಿದೆ. ಜೊತೆಗೆ ಮಿತಿ ಹಾಕುವುದರ ಮೂಲಕ ಎಲ್ಲಾ ವರ್ಗದ ರೈತರಿಗೆ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತದೆ ಎಂದು ವಿವರಿಸಿದರು.