ನವದೆಹಲಿ: ಅವರು ಸಿಪಿ ಯೋಗೇಶ್ವರ್ ಅಲ್ಲ, ಸಿಡಿ ಯೋಗೇಶ್ವರ್! ಅವರ ಬಳಿ ಎಲ್ಲರ ದಾಖಲೆಗಳಿವೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ. ಅವರು ಆಗಾಗ್ಗೆ ಒಬ್ಬೊಬ್ಬರನ್ನು ಭೇಟಿ ಮಾಡಿ, ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಒಬ್ಬೊಬ್ಬರ ಮಾಹಿತಿ ಅವರು ಆಗಾಗ ತೋರಿಸುತ್ತಿರುತ್ತಾರೆ. ಇಂದಿನ ರಾಜ್ಯ ಸರ್ಕಾರ ಸಿಡಿ ಸರ್ಕಾರ ಅಂತಲೇ ಹೇಳಬಹುದು ಎಂದು ವ್ಯಂಗ್ಯವಾಡಿದರು.
ಈ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ತನಿಖೆ ನಡೆಸಬೇಕು ರಾಜ್ಯ ಬಿಜೆಪಿ ನಾಯಕರೊಬ್ಬರ ಬಳಿ 500 ಸಿಡಿಗಳಿವೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಎಲ್ಲರೂ ಸಿಡಿಗಳ ಮೇಲೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿರುವುದು ರಾಜ್ಯಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ರಾಜ್ಯದ ಜನ ಇಂತಹವರನ್ನು ಕ್ಷಮಿಸಬಾರದು. ಯಾವುದೇ ಪಕ್ಷದವರಾದರೂ ಅವರ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ 2023ರ ಚುನಾವಣೆ ಬಗ್ಗೆ ಚಿಂತನೆ, ತಯಾರಿ ನಡೆಸುತ್ತಿದೆ. ಬೇರೆಯವರು ಕಾಂಗ್ರೆಸ್ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆಯಬಹುದು ಅಷ್ಟೇ.. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ, ಎಲ್ಲ ಕಾರ್ಯಕರ್ತರ ಆಶಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಗುರಿ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಪಕ್ಷ ಅವರನ್ನು ಗುರುತಿಸಿ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದರು.
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಾರ್ಯಕರ್ತರು ವಿಧಾನಸೌಧದ ಮೆಟ್ಟಿಲೇರಲು ಚಪ್ಪಡಿ ಕಲ್ಲಾಗಿರಲು ಬಯಸುತ್ತೇನೆ ಎಂದು ಶಿವಕುಮಾರ್ ಎಲ್ಲ ಸಂದರ್ಭದಲ್ಲೂ ಹೇಳಿದ್ದಾರೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಪ್ರಮುಖವಾದುದು. ಇದು ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಎಂದಿಗೂ ಒಬ್ಬರ ಹೆಸರಿನ ಮೇಲೆ ಚುನಾವಣೆ ಮಾಡಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ ಎಂದರು.