ಬೆಂಗಳೂರು: ಬಿಜೆಪಿಯವರಿಗೆ ಬೇಕಾಗಿರೋದು ಕಮೀಷನ್, ಒಎಂಆರ್ ಶೀಟ್ ತಿದ್ದೋದಷ್ಟೇ ಎಂದು ಸಂಸದ ಡಿ.ಕೆ ಸುರೇಶ್ ಟೀಕಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ. ಕಳೆದ ಬಾರಿ ಆಗಿರುವ ನಷ್ಟಕ್ಕೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇಲ್ಲಸಲ್ಲದ ಸಬೂಬುಗಳನ್ನು ಕೊಡುತ್ತಾರೆ. ರೈತರ ಪಂಪ್ ಸೆಟ್ ಮನೆಗಳು ಬಿದ್ದಿವೆ. ಅದಕ್ಕೆ ಪರಿಹಾರ ಇಲ್ಲ ಅಂತ ಅಧಿಕಾರಿಗಳು ಹೇಳ್ತಾರೆ. ಈಗ ಇವರು ಎಲ್ಲಿಂದ ಪರಿಹಾರ ನೀಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಶೇ 40ರಷ್ಟು ಕಮೀಷನ್ ಬಗ್ಗೆ ಧ್ವನಿ ಎತ್ತಿದ್ರು. ಅವರು ಆತ್ಮಹತ್ಯೆಯನ್ನು ಮಾಡಿಕೊಂಡ್ರು. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತಿಲ್ಲ. ಸರ್ಕಾರ ಪ್ರಕರಣ ಮುಚ್ಚಲು ಹೊರಟಿದೆ ಎಂದು ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಹಾಗಾಗಿ ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು. ಸಂತೋಷ್ ಪಾಟೀಲ್ ಅಷ್ಟೇ ಅಲ್ಲ, ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಕೂಡ ದೂರು ಕೊಟ್ಟಿತ್ತು. ಕೇಂದ್ರ ಸರ್ಕಾರ ತನಿಖೆ ಮಾಡಬೇಕಿತ್ತು. ಐಟಿ, ಇಡಿ, ಸಿಬಿಐ ಸಂಸ್ಥೆ ಮಧ್ಯಪ್ರವೇಶ ಮಾಡಬೇಕಿತ್ತು. ಆದರೆ ಬಿಜೆಪಿ ನಾಯಕರು ಪ್ರಕರಣ ಮುಚ್ಚಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.