ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆಯಲು ಪ್ರಧಾನಿ ಮೋದಿ ಲೈಸೆನ್ಸ್ ಕೊಟ್ಟ ಹಾಗೆ ಕಾಣ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿನ ಕಮಿಷನ್ ಆರೋಪದ ಬಗ್ಗೆ ಕೇಂದ್ರ ಗೃಹ ಇಲಾಖೆ ಬಂದು ಮಾಹಿತಿ ಪಡೆದು ಹೋಗಿದೆ. ಇಷ್ಟೆಲ್ಲಾ ನೋಡಿದ್ರೆ ಕಮಿಷನ್ ಪಡೆಯಲು ಕೇಂದ್ರದಿಂದಲೇ ಲೈಸೆನ್ಸ್ ಕೊಟ್ಟ ಹಾಗೆ ಕಾಣ್ತಿದೆ. ಬಿಜೆಪಿಯ ಈ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸಚಿವ ಮುನಿರತ್ನ ಅವರು ಮೂಲತಃ ಗುತ್ತಿಗೆದಾರರು. ಅವರಿಗೆ ಗೊತ್ತಿದೆ ಎಲ್ಲೆಲ್ಲಿ ಹೇಗೆ ಮಾಡಬೇಕು ಅಂತ. ಕೇಸ್ ಹಾಕ್ತೀನಿ ಅಂತ ಸಚಿವರು ದೆಹಲಿಯಲ್ಲಿ ಹೇಳಿದ್ದಾರೆ. ಕೆಂಪಣ್ಣ ಕೂಡ ಕೇಸ್ ಹಾಕಲಿ ಅಂತ ಹೇಳಿದ್ದಾರೆ ಎಂದರು.
ಕೆಂಪುಕೋಟೆಯಲ್ಲಿ ನಿಂತು ಮಾತಾಡಲಿ: ನಾವು ಸರ್ಕಾರವನ್ನು ಒತ್ತಾಯಿಸೋದು ಇವರು ನ್ಯಾಯಾಂಗ ತನಿಖೆ ಮಾಡಿಸಲಿ ಅಥವಾ ಸಿಬಿಐ ತನಿಖೆ ಆದ್ರೂ ಮಾಡಿಸಲಿ ಅಂತ. ಯಾವುದೇ ಕಾಮಗಾರಿ ಆದ್ರೂ ಅದರಲ್ಲಿ ಕೇಂದ್ರದ ಪಾಲೂ ಇದೆ. ಪ್ರಧಾನ ಮಂತ್ರಿ ಅಮೃತ ಮಹೋತ್ಸವದ ವೇಳೆ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತಾಡ್ತಾರೆ. ಆದರೆ, ರಾಜ್ಯದಲ್ಲಿ ಭ್ರಷ್ಟಾಚಾರದ ಕುರಿತು ಕೆಂಪುಕೋಟೆಯಲ್ಲಿ ನಿಂತು ಮಾತಾಡಲಿ ಎಂದು ಟೀಕಿಸಿದರು.
ರಾಜೀನಾಮೆ ಕೊಡ್ತೀನಿ: ತಮ್ಮ ಮೇಲೆಯೂ ಕೇಳಿ ಬಂದಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಂಸದರ ನಿಧಿ ಸಂಪೂರ್ಣವಾಗಿ ಕ್ಷೇತ್ರದಲ್ಲಿ ಎದ್ದು ಕಾಣ್ತಿದೆ. 8 ವರ್ಷದಲ್ಲಿ ಆದ ಕೆಲಸ ತೋರಿಸ್ತೀನಿ. ನಿಮ್ಮ ಕೈಯಲ್ಲಿ ಪುಸ್ತಕ ಕೊಡ್ತೀನಿ. ಸಂಸದರ ನಿಧಿಯಿಂದ ಒಂದೇ ಒಂದು ರೂಪಾಯಿ ಕಮಿಷನ್ ಪಡೆದುಕೊಂಡಿದ್ದನ್ನು ನೀವು ತೋರಿಸಿದರೆ, ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ. ನಾನು ಸಂಸದರ ನಿಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದರೆ ರಾಜೀನಾಮೆ ಕೊಡ್ತೀನಿ. ನನ್ನ ಹೆಸರು ಹೇಳಿ ಬೇರೆ ಯಾರು ಬೇಕಾದರೂ ವಸೂಲಿ ಮಾಡಬಹುದು. ಆರೋಪ ಯಾರು ಬೇಕಾದರೂ ಮಾಡಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಮುನಿರತ್ನ ನಮ್ಮ ಗುರು: ಸಚಿವ ಮುನಿರತ್ನ ನಿಮ್ಮ ಶಿಷ್ಯನೇ ಅಲ್ವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ. ಕೆ ಸುರೇಶ್, ಮುನಿರತ್ನ ನಮ್ಮ ಗುರು. ಡಬ್ಬ ಇದೆ. ಡಬ್ಬದೊಳಗೆ ಕಥೆ ಇದೆ. ಡಬ್ಬ ತೆಗೆದು ತೋರ್ಸೋದಿಲ್ಲ. ಸಿನಿಮಾ ತೆಗೀತಾರಲ್ಲ, ಕಥೆ ಹೇಳೋರು ಒಂದು ಲೈನ್ ಹೇಳಿಬಿಡ್ತಾರೆ. ಕಥೆ ಮೇಲೆ ಬಂಡವಾಳ ಹೂಡ್ತಾರಲ್ಲ ಅವರು ಡಬ್ಬದೊಳಗೆ ಕಥೆ ಇಟ್ಟುಬಿಟ್ಟು ಅದು ಹಂಗಿದೆ ಇದು ಹಿಂಗಿದೆ, ಮೂರು ಸಾಂಗ್ ಇದೆ, ನಾಲ್ಕು ಫೈಟ್ ಇದೆ ಅಂತ ಹೇಳ್ತಾರೆ. ಇಮೋಷನಲ್ ಕ್ರಿಯೇಟ್ ಮಾಡಿ ಎಂಜಿಆರ್, ಎನ್‌ಟಿಆರ್ ರಾಜ್ಕುಮಾರ್ಗಿಂತ ಮೀರಿ ಪಿಕ್ಚರ್ ಬರುತ್ತದೆ. ಇದು ಅಂತ ಸಿನಿಮಾನೂ ತೋರಿಸದೇ ವ್ಯಾಪಾರ ಮಾಡ್ತಿದ್ರು. ಹಂಗಾಗಿದೆ ಕಥೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಗಣೇಶ ಪ್ರತಿಷ್ಠಾಪನೆ: ತ್ವರಿತ ಅನುಮತಿಗೆ ಬಿಬಿಎಂಪಿ ಆಯುಕ್ತರಿಂದ ಸೂಚನೆ