ಬೆಂಗಳೂರು: ಅತಿ ಹಿಂದುಳಿದ ರಾಜ್ಯವಾಗಿದ್ದ ಮಧ್ಯಪ್ರದೇಶ ಈಗ ಬಂಡವಾಳ ಹೂಡಿಕೆಗೆ ಅತ್ಯುತ್ತಮ ರಾಜ್ಯವಾಗಿದೆ. ನಾವು ನಿಮಗೆ ಅತ್ಯತ್ತಮ ಪಾಲುದಾರರಾಗಿ ಕೆಲಸ ಮಾಡುತ್ತೇವೆ, ಬನ್ನಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.
ಮಧ್ಯಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ರಾಜ್ಯ ಸರ್ಕಾರದ ಸಹಾಯ-ಸಹಕಾರದ ಬಗ್ಗೆ ಸಿಎಂ ಶಿವರಾಜ ಸಿಂಗ್ ಚೌಹಾಣ್ ಉದ್ಯಮಿಗಳ ಜೊತೆ ನಗರದ ಯಶವಂತಪುರದಲ್ಲಿರುವ ತಾಜ್ ಹೋಟೆಲ್ನಲ್ಲಿ ಸಂವಾದ ನಡೆಸಿದರು. ಮುಂದಿನ ವರ್ಷ ಜನವರಿ 11, 12 ರಂದು ಎರಡು ದಿನಗಳ ಕಾಲ 'ಇನ್ವೆಸ್ಟ್ ಮಧ್ಯಪ್ರದೇಶ' ಇಂಧೋರ್ನಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು.
ಸಾಕ್ಷ್ಯಷಿತ್ರದ ಮೂಲಕ ಮಾಹಿತಿ:ಮಧ್ಯಪ್ರದೇಶ ರಾಜ್ಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿ ಆ ರಾಜ್ಯದ ಇತಿಹಾಸ, ಅಭಿವೃದ್ಧಿ, ಹೂಡಿಕೆಗೆ ಇರುವ ಸೌಹಾರ್ದಯುತ ವಾತಾವರಣದ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶ ಸಿಎಂ, ಮಧ್ಯಪ್ರದೇಶದ 8 ಕೋಟಿ ಜನರ ಪರವಾಗಿ ಎಲ್ಲರನ್ನೂ ಸ್ವಾಗತಿಸುತ್ತೇನೆ, ಮೊದಲು ಮಧ್ಯಪ್ರದೇಶ ಅತಿಹಿಂದುಳಿದ ರಾಜ್ಯ ಎಂದು ಟೀಕಿಸುತ್ತಿದ್ದರು. ಆದರೆ, ನಮ್ಮ ಸರ್ಕಾರ ಬಂದ ನಂತರ 3 ಲಕ್ಷ ಕಿಲೋಮಿಟರ್ ಉದ್ದದ ಅತ್ಯುತ್ತಮ ರಸ್ತೆ ನಿರ್ಮಿಸಿದ್ದೇವೆ, ಇಡೀ ರಾಜ್ಯದಲ್ಲಿ ಅತ್ಯುತ್ತಮ ರಸ್ತೆಗಳು ನಿರ್ಮಾಣವಾಗಿವೆ. ಜೊತೆಗೆ ನರ್ಮದಾ ಎಕ್ಸ್‌ಪ್ರೆಸ್ ರಸ್ತೆ ನಿರ್ಮಿಸಿದ್ದೇವೆ. ಮಧ್ಯಪ್ರದೇಶದ ಚಂಬಲ್ ಕಣಿವೆ ಬಗ್ಗೆ ಮುಂಬೈನವರು ಸಿನಿಮಾ ಮೂಲಕ ಗೇಲಿ ಮಾಡುತ್ತಿದ್ದರು. ನಾವು ಅಧಿಕಾರಕ್ಕೆ ಬರುವ ಮೊದಲು ನಮ್ಮ ರಾಜ್ಯವನ್ನು ಎಲ್ಲರೂ ಗೇಲಿ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬದಲಾಗುವಂತೆ ಮಾಡಿದ್ದೇವೆ, ಮಧ್ಯಪ್ರದೇಶದಲ್ಲಿ ಒಂದೊ ಢಾಕುಗಳು ಇರಬೇಕು, ಇಲ್ಲವೇ ಶಿವರಾಜ್ ಸಿಂಗ್ ಇರಬೇಕು ಎಂದು ನಾನು ಹೇಳಿದ್ದೆ. ಅದರಂತೆ ನಾನು ಇದ್ದೇನೆ, ಢಾಕುಗಳನ್ನು ಮಟ್ಟ ಹಾಕಿದ್ದೇನೆ. ಈಗ ಮಧ್ಯಪ್ರದೇಶ ಬಂಡವಾಳ ಹೂಡಿಕೆಗೆ ಅತ್ಯುತ್ತಮ ರಾಜ್ಯವಾಗಿದೆ ಎಂದರು.
ಮಧ್ಯಪ್ರದೆಶದ ಬಾಸುಮತಿ ಅಕ್ಕಿ ಜನಪ್ರಿಯ: ನಮ್ಮ ರಾಜ್ಯದ ಬಾಸುಮತಿ ಅಕ್ಕಿ ಅಮೆರಿಕ, ಇಂಗ್ಲೆಂಡ್ನಲ್ಲಿ ಅತ್ಯಂತ ಜನಪ್ರಿಯವಾಗಿದೆ. ನಮ್ಮ ಕೊಡುಗೆ ದೇಶಕ್ಕೆ ಮಹತ್ವದ್ದಾಗಿದೆ. ದೆಹಲಿ ಮೆಟ್ರೊ ರೈಲುಗಳು ಮಧ್ಯಪ್ರದೇಶದಲ್ಲಿ ಉತ್ಪನ್ನವಾಗುವ ವಿದ್ಯುತ್ ಮೇಲೆ ಓಡುತ್ತಿವೆ. ದೇಶದ ಜಿಎಸ್ಟಿಗೆ ನಾವು 4.6% ರಷ್ಟು ಕೊಡುಗೆ ಕೊಡುತ್ತಿದ್ದೇವೆ. ನಮ್ಮ ರಾಜ್ಯ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಈಗ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಸಮಯ ಬಂದಿದೆ.