ಬೆಂಗಳೂರು: ಜನವರಿ 11 ಮತ್ತು 12 ರಂದು ದೆಹಲಿಗೆ ತೆರಳಲು ನಿರ್ಧರಿಸಿದ್ದು, ಸಚಿವ ಸಂಪುಟ ವಿಸ್ತರಣೆ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಮಾತುಕತೆ ನಡೆಸಲು ದೆಹಲಿಗೆ ತೆರಳುವೆ: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಕೇಂದ್ರದ ನಾಯಕರು ಇನ್ನೂ ಸಮಯ ಅಂತಿಮಗೊಳಿಸಿಲ್ಲ. ಆದರೂ ದೆಹಲಿ ಪ್ರವಾಸಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ, ಅನುಮತಿ ಸಿಗುತ್ತಿದ್ದಂತೆ ತೆರಳಿ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸುತ್ತೇವೆ. ಕೇಂದ್ರ ಹಣಕಾಸು ಸಚಿವರನ್ನೂ ಭೇಟಿ ಮಾಡಲಿದ್ದೇವೆ ಎಂದರು.
ವಿದೇಶಕ್ಕೆ ತೆರಳುವ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ, ನೋಡೋಣ ಹೈಕಮಾಂಡ್ ನಾಯಕರು ಹೇಳಿದ ಕೂಡಲೇ ದೆಹಲಿಗೆ ಪ್ರಯಾಣ ಮಾಡುವೆ. ಆದರೆ, ವಿದೇಶಕ್ಕೆ ತೆರಳುವುದು ಬಹುಪಾಲು ಅನುಮಾನ ಎನ್ನುವ ಮೂಲಕ ವಿದೇಶ ಪ್ರವಾಸ ರದ್ದಾಗುವ ಸುಳಿವು ನೀಡಿದರು.
ಅಮಿತ್ ಶಾ ಮಂಗಳೂರು ಕಾರ್ಯಕ್ರಮ ಹುಬ್ಬಳ್ಳಿಗೆ ಶಿಫ್ಟ್ ಆದ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಎಂ, ಅಮಿತ್ ಶಾ ಮಂಗಳೂರು ಪ್ರವಾಸ ಫಿಕ್ಸ್ ಆಗಿರಲಿಲ್ಲ. ಮಾಧ್ಯಮದವರೇ ಫಿಕ್ಸ್ ಮಾಡಿದ್ರು, ಹೀಗಾಗಿ ಹುಬ್ಬಳ್ಳಿಗೆ ಶಿಫ್ಟ್ ಅನ್ನೋ ವಿಚಾರವೇ ಅನಗತ್ಯ ಎಂದರು.
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲು ಇರುವ ರೀತಿ ವೀರಶೈವ ಲಿಂಗಾಯತ ಧರ್ಮಕ್ಕೆ ಮೀಸಲಾತಿ ಕರ್ನಾಟಕದಲ್ಲಿ ನೀಡುವ ಕುರಿತು ಮನವಿ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಲು ಸಾಧ್ಯವೋ ಆ ರೀತಿ ಸಾಧಕ ಬಾಧಕ ಪರಿಶೀಲಿಸಿ ಸುಪ್ರೀಂಕೋರ್ಟ್ ತೀರ್ಪನ್ನೂ ನೋಡಿಕೊಂಡು ಮನವಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.