ಬೆಂಗಳೂರು: ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ ಎಂದು ಸಾಕಷ್ಟು ರೀತಿಯಲ್ಲಿ ನಗರ ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೊಂಚ ನಿರ್ಲಕ್ಷ್ಯ ವಹಿಸಿದರೂ ಸಾವಿನ ಕದ ತಟ್ಟುವುದಂತೂ ಗ್ಯಾರಂಟಿ ಎಂಬುದಕ್ಕೆ ಇತ್ತೀಚೆಗೆ ದುರಂತ ಅಂತ್ಯ ಕಂಡ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತಾಜಾ ಉದಾಹರಣೆಯಾಗಿದ್ದಾರೆ.
ಕಳೆದ ಶನಿವಾರ ರಾತ್ರಿ ಸ್ನೇಹಿತನ ಮನೆಗೆ ಹೋಗಿ ಬರುವಾಗ ಬೈಕ್ ಅಪಘಾತವಾಗಿತ್ತು. ಪರಿಣಾಮ ತಲೆಯ ಬಲಭಾಗಕ್ಕೆ ತ್ರೀವ ಪೆಟ್ಟಾಗಿದ್ದರಿಂದ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಜೊತೆಯಲ್ಲಿದ್ದ ಬೈಕ್ ಸವಾರ ನವೀನ್ ಸಹ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಲ್ಮೆಟ್ ಧರಿಸಿದ್ದರೆ ಸಾವು ಆಗುತ್ತಿರಲಿಲ್ಲ ಎಂಬುದು ಪೊಲೀಸರು ಸೇರಿದಂತೆ ಅನೇಕರ ಅಭಿಪ್ರಾಯವಾಗಿತ್ತು. ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲದೇ ಪ್ರಾಣ ಉಳಿಸಿಕೊಳ್ಳಲು ಹೆಲ್ಮೆಟ್ ಹಾಕಿಕೊಳ್ಳಿ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.
ರಾಜಧಾನಿಯಲ್ಲಿ 55 ಮಂದಿ ಸಾವು
ಇದೇ ವರ್ಷ ಜನವರಿಯಿಂದ ಮೇ 31ರ ವರೆಗೆ ನಗರದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ 55 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಮಹಿಳಾ ಸವಾರರು ಅಸುನೀಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಕಳೆದ ವರ್ಷದ ಮೊದಲ ಐದು ತಿಂಗಳಿಗೆ ಹೋಲಿಸಿದರೆ ಈ ಬಾರಿ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿರುವುದು ಸಮಾಧಾನಕಾರ ಸಂಗತಿಯಾಗಿದೆ.