ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡದೆ ಪರಿಣಾಮ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಾಯಂಡಹಳ್ಳಿ ಜಂಕ್ಷನ್ನಲ್ಲಿ ನಡೆದಿದೆ. ಟಿವಿಎಸ್ ಎಕ್ಸ್ಎಲ್ ಸ್ಕೂಟರಿನಲ್ಲಿ ಬರುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಕೆಳಗೆ ಸಿಲುಕಿ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಮೃತನ ವಿವರ ಇನ್ನೂ ಲಭ್ಯವಾಗಿಲ್ಲ. ಅಪಘಾತ ಬೆನ್ನಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಟೋ ಇನ್ನೋವಾ ಕಾರು ಡಿಕ್ಕಿ:ಏ.22 ರಂದು ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಅಲ್ಟೋ ಮತ್ತು ಇನ್ನೋವಾ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದರು. ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಭೀಕರ ಅಪಘಾತದ ಪತಿ, ಪತ್ನಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದರು. ರವಿ ಪೂಜಾರ್ ಬಿನ್ ಭೀಮಪ್ಪ ಪೂಜಾರಿ ಹಾಗೂ ಅವರ ಮಕ್ಕಳಾದ ಸಿರಿ ಪೂಜಾರಿ ಮತ್ತು ಇಂಚರ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಲಕ್ಷ್ಮಿ ಪೂಜಾರಿ ಮತ್ತು ಶಾಂತಲಾ ಪೂಜಾರಿ ಎಂಬುವವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.
ಮೃತ ರವಿ ಪೂಜಾರಿ ಎಂಬುವವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವರಾಗಿದ್ದರು. ಇವರು ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆ ಕೆಂಗೇರಿಯಲ್ಲಿ ವಾಸವಾಗಿದ್ದರು. ಪತ್ನಿಯ ತವರೂರಲ್ಲಿ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ:ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ.. ಇಬ್ಬರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ