ಬೆಂಗಳೂರು: ಮೋಟಾರು ವಾಹನ ತೆರಿಗೆಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಅಂಗೀಕೃತವಾಯಿತು. ಸಿಎಂ ಸಿದ್ದರಾಮಯ್ಯ 2023-24ರ ಸಾಲಿಗೆ ಮಂಡಿಸಿದ ಬಜೆಟ್ ಪ್ರಸ್ತಾವನೆಯಂತೆ ತೆರಿಗೆ ಪರಿಷ್ಕರಣೆ ಸಂಬಂಧ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ, ಇನ್ನು ಮುಂದೆ ವಾಹನ ಮಾಲೀಕರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ.
ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ:ಸರಕು ವಾಹನದ ಒಟ್ಟಾರೆ ತೂಕ 1,500 ಕೆ.ಜಿ - 12,000 ಕೆ.ಜಿ. ವರೆಗಿದ್ದರೆ, ಅಂಥ ಸರಕು ವಾಹನಗಳಿಗೆ ನೋಂದಣಿ ಸಮಯದಲ್ಲಿ 6 ವರ್ಗಗಳಲ್ಲಿ ಪೂರ್ಣಾವಧಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಹಿಂದೆ 1,500 ಕೆ.ಜಿ-5,500 ಕೆ.ಜಿ.ವರೆಗೆ ಕೇವಲ 3 ವರ್ಗಗಳು ಇದ್ದವು.
ತಿದ್ದುಪಡಿ ವಿಧೇಯಕದಂತೆ ಹೊಸ ಸರಕು ವಾಹನಗಳಿಗೆ ಒಟ್ಟಾರೆ ತೂಕ 1,500 ಕೆ.ಜಿ ಯಿಂದ 2,000 ಕೆ.ಜಿ.ವರೆಗೆ ಇದ್ದರೆ 20,000 ರೂ ಪೂರ್ಣಾವಧಿ ತೆರಿಗೆ ವಿಧಿಲಾಗುತ್ತದೆ. ಈ ಹಿಂದೆ 10,000 ರೂ. ಇತ್ತು. 2,000 ಕೆ.ಜಿ - 3,000 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 30,000 ರೂ ಪೂರ್ಣಾವಧಿ ತೆರಿಗೆ, 3,000 ಕೆ.ಜಿ - 5,500 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 40,000 ರೂ., 5,500 ಕೆ.ಜಿ - 7,500 ಕೆ.ಜಿ.ವರೆಗಿನ ಸರಕು ವಾಹನಗಳಿಗೆ 60,000 ರೂ., 7,500 ಕೆ.ಜಿ - 9,500 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳಿಗೆ 80,000 ರೂ. ಮತ್ತು 9,500 ಕೆ.ಜಿ. - 12,000 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನು 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಈಗಾಗಲೇ ನೋಂದಣಿಯಾಗಿರುವ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸರಕು ವಾಹನ ನೋಂದಣಿಯಾದಾಗಿನಿಂದ ಅದರ ಬಳಕೆ ವರ್ಷದ ವರೆಗಿನ ತೆರಿಗೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. 1,500 ಕೆ.ಜಿ-2,000 ಕೆ.ಜಿ ತೂಕದ ಸರಕು ವಾಹನದಿಂದ ಹಿಡಿದು 9,500ಕೆ.ಜಿ-12,000 ಕೆ.ಜಿ.ವರೆಗೆ ಇರುವ ವಿವಿಧ ಆರು ಸರಕು ವಾಹನ ವರ್ಗಗಳಿಗೆ ತೆರಿಗೆ ಏರಿಸಲಾಗಿದೆ. ವಿವಿಧ ಆರು ವರ್ಗಗಳ ಸರಕು ವಾಹನದ ಆಧಾರದಲ್ಲಿ 2 ವರ್ಷ ಮೀರಿದ ಸರಕು ವಾಹನಕ್ಕೆ ಕನಿಷ್ಠ 18,600ರೂ. ನಿಂದ ಗರಿಷ್ಠ 93,000 ರೂ. ವರೆಗೆ ಪೂರ್ಣಾವಧಿ ತೆರಿಗೆ ಹೆಚ್ಚಿಸಲಾಗಿದೆ. ಅದೇ ರೀತಿ 3 ವರ್ಷದಿಂದ 15 ವರ್ಷ ಹಳೆಯದಾದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಗಳು ದುಪ್ಪಟ್ಟಾಗಿವೆ.
ಇದನ್ನೂ ಓದಿ: Karnataka Budget: 3.27 ಲಕ್ಷ ಕೋಟಿ ರೂ. ಬಜೆಟ್ ಮಂಡನೆ, ವಿವಿಧ ತೆರಿಗೆ ಹೆಚ್ಚಳ