ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ನಿಗದಿಪಡಿಸಿದ್ದ ಪಠ್ಯಕ್ರಮದ ಪಾಠ ಪ್ರವಚನಗಳು ಮುಗಿದು ಪುನರಾವರ್ತನೆಯ ಹಂತದಲ್ಲಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಎಸ್ಎಸ್ಎಲ್ಸಿ ಪಾಠ ಪ್ರವಚನಗಳ ಪ್ರಗತಿ ಮತ್ತು ಪರೀಕ್ಷಾ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ನೋಂದಣಿ ಮಾಡಿಸಿರುವ ಯಾವುದೇ ವಿದ್ಯಾರ್ಥಿಯೂ ಗೈರು ಹಾಜರಾಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ ಈ ಪರೀಕ್ಷೆಯ ಫಲಿತಾಂಶ ಸಂಖ್ಯಾತ್ಮಕವಾಗಿರುವುದಕ್ಕಿಂತ ಗುಣಾತ್ಮಕವಾಗಿರುವಂತೆ ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಪ್ರಥಮ ಆದ್ಯತೆ ನೀಡಬೇಕು. ಪರೀಕ್ಷೆ ಕುರಿತಂತೆ ಬಿಗಿಯಾದ ಮೇಲ್ವಿಚಾರಣೆ ನಡೆಸಬೇಕು. ಪರೀಕ್ಷೆಯಲ್ಲಿ ಸಲ್ಲದ ವಿಷಯಗಳಿಗೆ ಆದ್ಯತೆ ನೀಡಿದ್ದು ಕಂಡುಬಂದರೆ ಸಂಬಂಧಿಸಿದ ಡಿಡಿಪಿಐ ಹಾಗೂ ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಆಯಾ ತಾಲೂಕು ಇಲ್ಲವೇ ಹೋಬಳಿ ಮಟ್ಟದಲ್ಲಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಗಳನ್ನು ನಡೆಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದು ಸೇರಿದಂತೆ ವಿದ್ಯಾರ್ಥಿಗಳ ಅಭ್ಯಾಸದ ಪ್ರಗತಿ, ವಿದ್ಯಾರ್ಥಿಗಳನ್ನು ಪರೀಕ್ಷೆಯತ್ತ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು. ಪರೀಕ್ಷೆಗೆ ನೋಂದಣಿ ಮಾಡಿಸಿಯೂ ಸಹ ತರಗತಿಗೆ ಹಾಜರಾಗದಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸಿ, ಅವರು ಪರೀಕ್ಷೆಗೆ ಹಾಜರಾಗುವಂತೆ ಗಮನ ಹರಿಸಬೇಕು. ಈ ಬಾರಿ ತರಗತಿ ಹಾಜರಿ ಕಡ್ಡಾಯವಲ್ಲವಾದ್ದರಿಂದ ತರಗತಿಗೆ ಹಾಜರಾಗದಿರುವ ಮಕ್ಕಳು ಎಲ್ಲಿದ್ದಾರೆ, ಪರೀಕ್ಷೆಗೆ ಹಾಜರಿ ಕುರಿತ ಅವರ ಭಾವನೆಗಳನ್ನು ಅರಿತು ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಕೆ ಮತ್ತು ಪಠ್ಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಶಿಕ್ಷಕರ ಕೊರತೆ ಇದ್ದರೆ ನಿಯೋಜನೆ ಮಾಡಿ
ಕೆಲ ಶಾಲೆಗಳಲ್ಲಿ ಪಠ್ಯಕ್ರಮ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿಯಿದೆ. ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯದ ಶಿಕ್ಷಕರ ಕೊರತೆಯಿದ್ದರೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಆ ಶಾಲೆಗಳಿಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಎಸ್ಎಸ್ಎಲ್ಸಿ ಪಠ್ಯಕ್ರಮ ಮತ್ತು ಪರೀಕ್ಷೆ ಕುರಿತಂತೆ ಪರಿಶೀಲಿಸಲು ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಇದೇ ವಾರ ಬೆಳಗಾವಿ ವಿಭಾಗ ವ್ಯಾಪ್ತಿಯ 4 ಜಿಲ್ಲೆಗಳ ಪರಿಶೀಲನೆ ಮಾಡಿದ್ದೇನೆ. ಎಲ್ಲ ಕಡೆಯೂ ಪಠ್ಯ ಕ್ರಮ ಪುನರಾವರ್ತನೆ ಹಂತದಲ್ಲಿದ್ದು, ಆಯಾ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪರೀಕ್ಷೆಯ ಮಹತ್ವ ಕುರಿತು ವಿವರಿಸುವುದು ಸೇರಿದಂತೆ ತಮ್ಮದೇ ಆದ ರೀತಿಯ ವಿದ್ಯಾರ್ಥಿ ಸಂಪರ್ಕದ ಮೂಲಕ ಅವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪ್ರೇರಣೆಗೊಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವಯಂಪ್ರೇರಣೆಯಿಂದ ಮಕ್ಕಳ ಪ್ರೇರೇಪಣೆಗೆ ಮುಂದಾಗಬೇಕು
ಕೆಲವು ಕಡೆಗಳಲ್ಲಿ ಮುಖ್ಯೋಪಾಧ್ಯಾಯರು ತಾಯಂದಿರ ಸಭೆ ಕರೆದು ಪರೀಕ್ಷೆಯ ಮಹತ್ವವನ್ನು ವಿವರಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಪರೀಕ್ಷೆ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದು, ಅದಕ್ಕಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರ ಇಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಬೇಕು. ಶಿಕ್ಷಕರಾಗಲಿ ಇಲ್ಲವೇ ಅಧಿಕಾರಿಗಳಾಗಲಿ ಇದೊಂದು ಸರ್ಕಾರಿ ಆದೇಶ ಎಂದು ತಿಳಿದುಕೊಳ್ಳುವುದಕ್ಕಿಂತ ಸ್ವಯಂಪ್ರೇರಣೆಯಿಂದ ಮಕ್ಕಳ ಪ್ರೇರೇಪಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.