ಬೆಂಗಳೂರು : ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಹತ್ಯೆಗೈದಿದ್ದ ಸೊಸೆ ಸಹಿತ ಮೂವರನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಶ್ಮಿ, ಅಕ್ಷಯ್ ಹಾಗೂ ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್ 5ರಂದು ಲಕ್ಷ್ಮಮ್ಮ (50) ಎಂಬವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು, ಹೃದಯಾಘಾತವೆಂದು ಕಥೆ ಸೃಷ್ಟಿಸಿದ್ದರು.
ಆರೋಪಿ ರಶ್ಮಿಗೆ ಮಂಜುನಾಥ್ ಎಂಬಾತನೊಂದಿಗೆ ಮದುವೆಯಾಗಿತ್ತು. ಆದರೆ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ರಶ್ಮಿ ಸಂಪರ್ಕ ಹೊಂದಿದ್ದಳು. ಮನೆಯ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮಮ್ಮ ಹಾಗೂ ರಶ್ಮಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದ್ದರಿಂದ ತಾನೇ ಮನೆಯ ಹಣದ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾಯುತ್ತಿದ್ದಳು.
ಈ ಸಂಬಂಧ ರಶ್ಮಿ ಪ್ರಿಯಕರ ಅಕ್ಷಯ್ ಜೊತೆ ಸೇರಿ ಅತ್ತೆಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಳು. ಅದರಂತೆ ಅಕ್ಟೋಬರ್ 5ರಂದು ಮನೆಯಲ್ಲಿ ಗಂಡ ಇರದಿದ್ದಾಗ ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿದ್ದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದಿದ್ದಳು. ನಂತರ ಹೃದಯಾಘಾತವಾಗಿ ಸಾವನ್ನಪ್ಪಿರುವುದಾಗಿ ಬಿಂಬಿಸಿದ್ದಳು.
ಆರೋಪಿ ರಶ್ಮಿ ಮತ್ತು ಅತ್ತೆ ಲಕ್ಷ್ಮಮ್ಮ ಫೋನ್ ಚಾಟಿಂಗ್ನಿಂದ ಬಯಲಾಯ್ತು ಕೊಲೆ ರಹಸ್ಯ: ಅದೇ ಬಿಲ್ಡಿಂಗ್ನ 1ನೇ ಮಹಡಿಯಲ್ಲಿ ವಾಸವಿದ್ದ ರಾಘವೇಂದ್ರ ಎಂಬಾತ ಅನುಮಾನಗೊಂಡು ಅಕ್ಷಯ್ ಮೊಬೈಲ್ ಪರಿಶೀಲನೆ ನಡೆಸಿದ್ದ. ಈ ವೇಳೆ ಅಕ್ಷಯ್ ಮತ್ತು ರಶ್ಮಿ ಚಾಟಿಂಗ್ನಿಂದ ಹತ್ಯೆಯ ಸಂಚು ಬಯಲಾಗಿತ್ತು. ಈ ವಿಷಯವನ್ನು ರಾಘವೇಂದ್ರ ಇತ್ತೀಚಿಗೆ ರಶ್ಮಿಯ ಪತಿ ಮಂಜುನಾಥ್ ಬಳಿ ಹೇಳಿದ್ದ. ಅಲ್ಲದೇ ಚಾಟಿಂಗ್ ಮಾಡಿರುವುದನ್ನು ಸಾಕ್ಷ್ಯ ಸಮೇತ ನೀಡಿದ್ದ. ಪರಿಶೀಲನೆ ಬಳಿಕ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ಮಂಜುನಾಥ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ :ಕಲಬುರಗಿ : ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ವಿಷ ಕುಡಿಸಿ ಕೊಲೆಗೈದ ಆರೋಪ