ಬೆಂಗಳೂರು:ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ನ ಕಾಡುಗೋಡಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ತಾಯಿ ಸೌಂದರ್ಯ (23) ಹಾಗೂ 9 ತಿಂಗಳ ಹೆಣ್ಣುಮಗು ಮೃತಪಟ್ಟಿದ್ದಾರೆ.
ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ತಂತಿಯನ್ನು ಇಬ್ಬರೂ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಸುಕಿನ ಜಾವ ಘಟನೆ ನಡೆದಿದ್ದರಿಂದ ತಂತಿ ಕಾಣಿಸಿರಲಿಲ್ಲ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.ಕೆ.ಗೋಪಾಲನ್ ಕಾಲೊನಿಯ ನಿವಾಸಿಯಾಗಿದ್ದ ಸೌಂದರ್ಯ ಹಾಗೂ ಸಂತೋಷ್ ದಂಪತಿ ದೀಪಾವಳಿ ಹಬ್ಬಕ್ಕೆಂದು ಚೆನ್ನೈನ ಮನೆಗೆ ಹೋಗಿ ಇಂದು ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಮಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಸೌಂದರ್ಯ ಕತ್ತಲಿನಲ್ಲಿ ಗಮನಿಸದೇ ವಿದ್ಯುತ್ ತಂತಿ ತುಳಿದಿದ್ದಾರೆ. ಕಣ್ಮುಂದೆಯೇ ಒದ್ದಾಡುತ್ತಿದ್ದ ಪತ್ನಿ, ಮಗಳನ್ನು ಬದುಕಿಸಲು ಸಂತೋಷ್ ಪ್ರಯತ್ನಟ್ಟರೂ ಸಾಧ್ಯವಾಗಿಲ್ಲ. ರಕ್ಷಣೆ ವೇಳೆ ವಿದ್ಯುತ್ ಪ್ರವಹಿಸಿ ಸಂತೋಷ್ ಕೈ ಸುಟ್ಟಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸಂಬಂಧಪಟ್ಟ ಅಸಿಸ್ಟೆಂಟ್ ಇಂಜಿನಿಯರ್ ಚೇತನ್, ಜೂನಿಯರ್ ಇಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರನ್ನು ವಶಕ್ಕೆ ಪಡೆದಿರುವ ಕಾಡುಗೋಡಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೂ ರೂಟ್ ಪರಿಶೀಲನೆ ಮಾಡದ ಸಿಬ್ಬಂದಿ ರೀ ಚಾರ್ಜ್ ಮಾಡಿದ್ದಾರೆ. ಅದೇ ಸಮಯದಲ್ಲಿ ಬಂದಿದ್ದ ಸೌಂದರ್ಯ ತಂತಿ ತುಳಿದಾಗ ವಿದ್ಯುತ್ ಪ್ರವಹಿಸಿದ್ದರಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 304A (ನಿರ್ಲಕ್ಷ್ಯತೆಯಿಂದ ಸಾವಿಗೆ ಕಾರಣರಾಗುವುದು) ಅಡಿಯಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.