ಬೆಂಗಳೂರು:ಕಳೆದ ಐದು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಇದೀಗ ಪೊಲೀಸರು ತಾಯಿ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಬೇಧಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ, ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.
ತಾರ್ಕಿಕ ಅಂತ್ಯ ಕಾಣದೆ ದೂಳು ಹಿಡಿದಿದ್ದ ಪ್ರಕರಣವನ್ನ ಮತ್ತೆ ಸವಾಲಾಗಿ ಸ್ವೀಕರಿಸಿದ ಕೆಂಗೇರಿ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ತಾಯಿ ಶಾಂತಕುಮಾರಿ ಕೊಲೆಗೈದ ಆರೋಪದಡಿ ಶಶಿಕಲಾ (46), ಆಕೆಯ ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಐದು ವರ್ಷಗಳ ಹಿಂದೆ ನಡೆದಿದ್ದ ವೃದ್ದೆಯ ಹತ್ಯೆ: ಕೆಂಗೇರಿ ಸ್ಯಾಟಲೈಟ್ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಶಶಿಕಲಾ ಗೃಹಿಣಿಯಾಗಿದ್ದು, ಈಕೆಯ ಗಂಡ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತನಾಗಿದ್ದ ಈತ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ.
ಓದುವ ವಿಷಯದಲ್ಲಿ ಮುಂದಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ದೆ ಶಾಂತಕುಮಾರಿಗೆ 2016 ಆಗಸ್ಟ್ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ. ಇದನ್ನು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಅಸಮಾಧಾನಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು.
ಶವವನ್ನ ಗೋಡೆಯಲ್ಲಿ ಬಚ್ಚಿಟ್ಟ ತಾಯಿ-ಮಗ:ತನ್ನ ತಾಯಿಯನ್ನ ಮಗ ಸಂಜಯ್ ಕೊಲೆಗೈದ ವಿಚಾರ ಅರಿತುಕೊಂಡ ಶಶಿಕಲಾ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗುವೆ. ನಿನ್ನ ಮಗನ ಭವಿಷ್ಯವನ್ನ ನೀನೆ ಹಾಳು ಮಾಡುತ್ತೀಯಾ ಎಂದು ಪೊಲೀಸರಿಗೆ ಹೇಳದಂತೆ ಸಂಜಯ್ ಗೋಗರಿದಿದ್ದ. ಇದಕ್ಕೆ ಶಶಿಕಲಾ ಒಪ್ಪಿಕೊಂಡಿದ್ದರು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್ಗೆ ಸಂಜಯ್ ವಿಷಯ ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ.