ಬೆಂಗಳೂರು: ವೈಟ್ ಫೀಲ್ಡ್ ವಿಭಾಗ ವ್ಯಾಪ್ತಿಯ ಕಾಡುಗೋಡಿಯ 4ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್ ಫಾರ್ಮ್ ಸಿಗ್ನಲ್ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿಗೊಳಿಸಲಾಗಿದೆ.
ಭಾನುವಾರ ನಸುಕಿನ ಜಾವ ಸೌಂದರ್ಯ (23) ಮತ್ತು ಅವರ ಮಗಳು ಲೀಲಾ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿದ್ಯುತ್ ಅಪಘಾತವನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಕರ್ತವ್ಯಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಇಂಧನ ಇಲಾಖೆಗೆ ನಿರ್ದೇಶಿಸಿದ್ದರು.
ಇಂಧನ ಸಚಿವರ ಸೂಚನೆ ಮೇರೆಗೆ 4ನೇ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಸುಬ್ರಮಣ್ಯ, ಸಹಾಯಕ ಇಂಜಿನಿಯರ್ ಎಸ್.ಚೇತನ್, ಕಿರಿಯ ಇಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮನ್ ಮಂಜುನಾಥ್ ರೇವಣ್ಣ ಹಾಗೂ ಲೈನ್ ಮನ್ ಬಸವರಾಜು ಅವರನ್ನು ಅಮಾನತುಗೊಳಿಸಿ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.