ಬೆಂಗಳೂರು: ಮೋಸ್ಟ್ ವಾಟೆಂಡ್ ಭೂಗತ ಪಾತಕಿ ರವಿಪೂಜಾರಿಯನ್ನು ಮಡಿವಾಳದ ಎಫ್ಎಸ್ಎಲ್ ಕಚೇರಿಯಲ್ಲಿ ಬಿಗಿ ಭದ್ರತೆಯಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಹಾಗೂ ಇನ್ಸ್ ಪೆಕ್ಟರ್ ಬೊಳೆತ್ತಿನ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇನ್ನು ನ್ಯಾಯಧೀಶರ ಸೂಚನೆಯಂತೆ ರವಿಪೂಜಾರಿ ಇರುವ ರೂಂ ಸುತ್ತ ಮುತ್ತ ಸಿಸಿ ಕ್ಯಾಮೆರಾ ಅಳವಡಿಸಿ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಹಾಗೆ ರವಿಪೂಜಾರಿಯ ಪ್ರತಿ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಕ್ಷಿಗಳಾಗಿ ಪರಿಗಣಿಸಲಿದ್ದಾರೆ.
ರವಿ ಪೂಜಾರಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ರಾಜ್ಯದಲ್ಲಿ ಸಕ್ರಿಯನಾಗಿದ್ದ. ಹೀಗಾಗಿ ಗ್ಯಾಂಗ್ ಸದಸ್ಯರ ಇಂಚಿಚು ಮಾಹಿತಿಯನ್ನ ಸಿಸಿಬಿ ತಂಡ ಕಲೆಹಾಕಲಿದೆ. ಹಾಗೆಯೇ ಬೆಂಗಳೂರಿನ ಪ್ರಮುಖ ಪ್ರಕರಣಗಳಾದ 2005 ಆರ್ ಟಿ ನಗರದ ಉದ್ಯಮಿ ಸುಬ್ಬರಾಜ್ ಕೊಲೆ, 2007ರಲ್ಲಿ ಹಫ್ತಾ ಕೊಡಲಿಲ್ಲವೆಂದು ಶಬನಂ ಬಿಲ್ಡರ್ಸ್ ಶೈಲಜಾ ಹಾಗೂ ರವಿ ಹತ್ಯೆ, 2009ರಲ್ಲಿ ಇಂದಿರಾನಗರ ಖಾಸಗಿ ವಾಹಿನಿಯ ಮೇಲೆ ದಾಳಿ ಹೀಗೆ ನಾನಾ ಪ್ರಕರಣಗಳನ್ನ ಮುಂದಿಟ್ಟುಕೊಂಡು ತನಿಖಾ ತಂಡ ರವಿ ಪೂಜಾರಿಯ ವಿಚಾರಣೆ ನಡೆಸಲಿದೆ.
ರವಿ ಗ್ಯಾಂಗ್ ಸದಸ್ಯರ ಶೋಧಕ್ಕೆ ವಿಶೇಷ ತಂಡ:
ಈಗಾಗಲೇ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿರುವ ಪ್ರಕಾರ ರವಿ ಪೂಜಾರಿ ತನ್ನದೇ ಆದ ಗ್ಯಾಂಗ್ ಹೆಣೆದಿದ್ದ. ಅದು ಕರ್ನಾಟಕದಲ್ಲಿ ಸಕ್ರಿಯವಾಗಿ ಕಾರ್ಯಾಚರಣೆಯಲ್ಲಿದ್ದು, ರವಿ ಪೂಜಾರಿ ಜೈಲಲ್ಲಿ ಇದ್ರು ಕೂಡ ತನ್ನದೇ ರೀತಿಯಲ್ಲಿ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಹೀಗಾಗಿ ಒಂದೆಡೆ ರವಿ ಪೂಜಾರಿ ವಿಚಾರಣೆ ನಡೆಸಿದರೆ, ಮತ್ತೊಂದೆಡೆ ರವಿ ಪೂಜಾರಿ ಸಹಚರರಿಗಾಗಿಯೂ ಶೋಧ ಮುಂದುವರೆದಿದೆ.