ಕರ್ನಾಟಕ

karnataka

ETV Bharat / state

ಸಿಎಂ ಸೂಚನೆಯಂತೆ ಶಕ್ತಿಸೌಧಕ್ಕೆ ಆಗಮಿಸಿದ ಸಚಿವರು - undefined

ಕಳೆದ ಕೆಲ ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಚೇರಿಗಳಿಗೆ ಇಂದು ಜೆಡಿಎಸ್‍ನ ಬಹುತೇಕ ಸಚಿವರು ಹಾಜರಾಗಿದ್ದು, ಇಲಾಖೆಯ ಕೆಲಸ ಕಾರ್ಯಗಳ ಮೇಲೆ ಸಂಪೂರ್ಣ ಗಮನ ಹರಿಸಿದ ದೃಶ್ಯಗಳು ಕಂಡು ಬಂದವು.

ವಿಧಾನಸೌಧ

By

Published : Jun 3, 2019, 6:22 PM IST

ಬೆಂಗಳೂರು:ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಏನಾದರಾಗಲಿ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಸಚಿವರಿಗೆ ಹೇಳಿದ ಮಾತು ಇಂದಿನಿಂದಲೇ ಜಾರಿಗೆ ಬಂದಿದೆ.

ಕಳೆದ ಕೆಲ ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಚೇರಿಗಳಿಗೆ ಇಂದು ಜೆಡಿಎಸ್‍ನ ಬಹುತೇಕ ಸಚಿವರು ಹಾಜರಾಗಿದ್ದು, ತಮ್ಮಇಲಾಖೆಯ ಕೆಲಸ ಕಾರ್ಯಗಳ ಮೇಲೆ ಸಂಪೂರ್ಣ ಗಮನಹರಿಸಿದರು. ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣದಿಂದ ಬ್ಯೂಸಿಯಾಗಿದ್ದ ಸಚಿವರು ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಿಂದ ಮಂಕಾಗಿದ್ದರು.

ವಿಧಾನಸೌಧಕ್ಕೆ ಆಗಮಸಿದ ಸಚಿವರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲು ಅನುಭವಿಸಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಉಭಯ ಪಕ್ಷಗಳ ಬಹುತೇಕ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಚೇರಿಗೆ ಬರುವುದನ್ನು ಕಡಿಮೆ ಮಾಡಿದ್ದರು.

ಇದನ್ನು ಗಮನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಜಡ್ಡುಗಟ್ಟಿದ್ದ ತಮ್ಮ ಆಡಳಿತ ಯಂತ್ರಕ್ಕೆ ಚುರುಕು ನೀಡಲು ತೀರ್ಮಾನ ಕೈಗೊಂಡಿದ್ದು, ಕಡ್ಡಾಯವಾಗಿ ವಾರಕ್ಕೆ ಮೂರ್ನಾಲ್ಕು ದಿನ ವಿಧಾನಸೌಧ ಹಾಗೂ ವಿಕಾಸಸೌಧದ ನಿಮ್ಮ ಕಚೇರಿಯಲ್ಲಿ ಹಾಜರಿರಬೇಕು ಎಂದು ತಮ್ಮ ಸಚಿವರಿಗೆ ಸೂಚಿಸಿದ್ದಾರೆ. ಸರ್ಕಾರದ ಕತೆಯನ್ನು ನಾವು ಹಾಗೂ ಕಾಂಗ್ರೆಸ್ ನಾಯಕರು ನೋಡಿಕೊಳ್ಳುತ್ತೇವೆ. ನಿಮ್ಮ ಪಾಡಿಗೆ ನೀವು ಇಲಾಖೆಯ ಕೆಲಸ ಮಾಡಿ. ಆ ಮೂಲಕ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಎಂದು ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಕುಮಾರಸ್ವಾಮಿಯವರ ಈ ಸೂಚನೆಯ ಹಿನ್ನೆಲೆಯಲ್ಲಿ ಅವರ ಸಂಪುಟದಲ್ಲಿರುವ ಬಹುತೇಕ ಜೆಡಿಎಸ್ ಸಚಿವರು ಇಂದು ವಿಧಾನಸೌಧ ಹಾಗೂ ವಿಕಾಸಸೌಧದ ತಮ್ಮ ಕಚೇರಿಗಳಿಗೆ ಆಗಮಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿರುವ ದೃಶ್ಯಗಳು ಕಂಡು ಬಂದವು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಹಲವು ಸಚಿವರು ತಮ್ಮ ಕಚೇರಿಗಳಲ್ಲಿ ಹಾಜರಾಗಿದ್ದರಾದರೂ ಮಾಧ್ಯಮದವರೊಂದಿಗೆ ಮಾತನಾಡಲು ಮಾತ್ರ ನಿರಾಕರಿಸಿದರು.

For All Latest Updates

TAGGED:

ABOUT THE AUTHOR

...view details