ಬೆಂಗಳೂರು : "ಬಹುತೇಕ ಅಪಘಾತಗಳಲ್ಲಿ ಸಾವನ್ನಪ್ಪುವವರು ಮುಖ್ಯವಾಗಿ ಹೆಲ್ಮೆಟ್ ಧರಿಸಿರುವುದಿಲ್ಲ ಮತ್ತು ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಹಾಕಿರುವುದಿಲ್ಲ" ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತಿಳಿಸಿದರು.
ಭಾನುವಾರ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರಿನ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಟ್ರಸ್ ವೆಲ್ ಆಸ್ಪತ್ರೆಯ ಆವರಣದಿಂದ ರಸ್ತೆ ಸುರಕ್ಷತೆ ಸಾರುವ ಬೈಕಥಾನ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಇತ್ತೀಚಿನ ಅಧ್ಯಯನದ ಪ್ರಕಾರ, ಅಪಘಾತಗಳಲ್ಲಿ ಸೂಕ್ತ ಶಿಕ್ಷಣ ಪಡೆಯದವರು ಸಾವನ್ನಪ್ಪುತ್ತಿದ್ದಾರೆ. ಬಹುತೇಕ ಮಂದಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತ್ರ ಪೂರ್ಣಗೊಳಿಸಿರುವುದು ಕಂಡು ಬಂದಿದೆ. ಹೀಗಾಗಿ ಶಾಲಾ ಹಂತದಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಬೇಕು. ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮೊಬೈಲ್ ಬಳಸಬಾರದು" ಎಂದು ಅವರು ಸೂಚನೆ ನೀಡಿದರು.
ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಮಾತನಾಡಿ, "ನಮ್ಮ ತಂಡ ವಿಶ್ವಕಪ್ ಕ್ರಿಕೆಟ್ ಜಯಗಳಿಸಿದಾಗ ಸುರಕ್ಷತೆಗಾಗಿ ಹೆಲ್ಮೆಟ್ ಇರಲಿಲ್ಲ. ಆದರೆ ಈಗ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಲಾಗುತ್ತಿದೆ. ವಿದ್ಯಾರ್ಥಿಗಳು, ಯುವ ಸಮೂಹ ವೇಗದ ರೋಚಕತೆಗೊಳಗಾಗಿ ಜೀವ ಕಳೆದುಕೊಳ್ಳಬಾರದು. ತಮ್ಮ ಜೀವ ರಕ್ಷಣೆಯ ಜತೆಗೆ ಮತ್ತೊಬ್ಬರ ಸುರಕ್ಷತೆಗೂ ಒತ್ತು ನೀಡುವುದು ಮಾನವೀಯ ಧರ್ಮ" ಎಂದು ಅಭಿಪ್ರಾಯಪಟ್ಟರು.