ಬೆಂಗಳೂರು:ಕಾನೂನು ಮತ್ತು ಸುವ್ಯವಸ್ಥೆಗಾಗಿ ಹಾಗೂ ಕೊಲೆ, ದರೋಡೆ ಹಾಗೂ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು 2017ರಲ್ಲಿ ಜಾರಿಗೆ ತರಲಾಗಿದ್ದ ಕರ್ನಾಟಕ ಸಾರ್ವಜನಿಕರ ಸುರಕ್ಷೆ (ಕ್ರಮಗಳು) ಕಾಯ್ದೆಯಂತೆ ನಗರದ ಸಾರ್ವಜನಿಕ ಹಾಗೂ ಖಾಸಗಿ ಪ್ರದೇಶಗಳಲ್ಲಿ 2.24 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ರಾಜಧಾನಿಯಲ್ಲಿ 2023ರಲ್ಲಿ 12 ಸಾವಿರಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, 3,500 ಪ್ರಕರಣಗಳನ್ನು ಮಾತ್ರ ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಈ ಬಗ್ಗೆ ಪೊಲೀಸರು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದ್ದರು. ಬೇಧಿಸಿದ ಬಹುತೇಕ ಪ್ರಕರಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಧರಿಸಿ ಅರೋಪಿಗಳನ್ನು ಸೆರೆಹಿಡಿದಿದ್ದಾರೆ. ಸಾಂಪ್ರದಾಯಿಕ ಪೊಲೀಸ್ ತನಿಖೆ ಜೊತೆಗೆ ತಾಂತ್ರಿಕತೆ ಮೈಗೂಡಿಸಿಕೊಂಡಿರುವ ನಗರ ಪೊಲೀಸರು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗುವ ಆರೋಪಿಗಳ ಚಲನವಲನ, ಕೃತ್ಯಕ್ಕೆ ಬಳಸಿದ ವಾಹನ ಸೇರಿ ಇನ್ನಿತರ ಸುಳಿವು ಅಧರಿಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಕರ್ನಾಟಕ ಸಾರ್ವಜನಿಕ ಸುರಕ್ಷೆ ಕಾಯ್ದೆಯಡಿ ನಗರದ ಎಂಟು ಪೊಲೀಸ್ ವಿಭಾಗದಲ್ಲಿ ಅಳವಡಿಸಿರುವ 2.24 ಲಕ್ಷ ಕ್ಯಾಮೆರಾಗಳು. ಜೊತೆಗೆ ಸೇಫ್ ಸಿಟಿ ಯೋಜನೆಯಡಿ ಅಳವಡಿಸಲಾದ 7 ಸಾವಿರಕ್ಕೂ ಹೆಚ್ಚು ಕ್ಯಾಮೆರಾಗಳ ನೆರವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ.
ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಜನಸಂದಣಿ ಪ್ರದೇಶಗಳಾದ ಬಸ್-ರೈಲು ನಿಲ್ದಾಣ, ಮಾರುಕಟ್ಟೆ, ಸಿನಿಮ ಮಂದಿರ ಸೇರಿದಂತೆ ಸಾರ್ವಜನಿಕ ಹಾಗೂ ಕನಿಷ್ಠ 100ಕ್ಕಿಂತ ಹೆಚ್ಚು ಜನರು ಓಡಾಡುವ ಖಾಸಗಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ನಗರ ಪೊಲೀಸರು ತಿಳುವಳಿಕೆ ಮೂಡಿಸಿದ್ದರು. ಅಲ್ಲದೆ, ಸಿಸಿಟಿವಿ ಅಳವಳಡಿಸಿಕೊಳ್ಳದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಸಿದ ಪರಿಣಾಮ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಪ್ರದೇಶ ಹಾಗೂ ಅಪಾರ್ಟ್ಮೆಂಟ್, ಬಡಾವಣೆ ಸೇರಿದಂತೆ ಖಾಸಗಿ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದರಿಂದ ಅಪರಾಧ ನಿಯಂತ್ರಣದ ಜೊತೆಗೆ ಪ್ರಕರಣಗಳನ್ನು ಶೀಘ್ರ ಬೇಧಿಸಲು ನೆರವಾಗುತ್ತಿದೆ.