ಬೆಂಗಳೂರು :ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿದ್ದು, ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿಯು ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಮೊದಲನೇ ಪತ್ನಿ ಮತ್ತು ಆಕೆಯ ಪುತ್ರಿಯರಿಗೆ ಶೇ. 50ರಷ್ಟು ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ನೈರುತ್ಯ ರೈಲ್ವೆಗೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಸಾವನ್ನಪ್ಪಿದ ರೈಲ್ವೆ ಉದ್ಯೋಗಿಯ ಎರಡನೇ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಉದ್ಯೋಗಿಯ ಹಕ್ಕುಗಳು ಅಥವಾ ಅವರ ಕುಟುಂಬವು ಪಿಂಚಣಿ ನಿಯಮ ಅವಲಂಬಿಸಿರುತ್ತದೆ. ನಿಯಮಗಳು ಇಲ್ಲದಿದ್ದರೆ ಪಿಂಚಣಿ ಇಲ್ಲ. ಒಂದೊಮ್ಮೆ ನಿಯಮಗಳು ಇದ್ದರೆ ಪಿಂಚಣಿಯನ್ನು ನಿಯಮದ ಪ್ರಕಾರ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ರೈಲು ಸೇವೆಗಳ (ಪಿಂಚಣಿ) ನಿಯಮಗಳು 1993ಕ್ಕೆ 2016ರಲ್ಲಿ ತಿದ್ದುಪಡಿ ಮಾಡಿ ರೈಲು ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಬ್ಬರು ಅಥವಾ ಹೆಚ್ಚು ವಿಧವೆಯರು ಕುಟುಂಬ ಪಿಂಚಣಿ ಪಡೆಯಲು ನಿಯಮದಲ್ಲಿ ಸ್ಪಷ್ಟವಾಗಿ ಹಕ್ಕು ಕಲ್ಪಿಸಲಾಗಿದೆ. ಸಾವನ್ನಪ್ಪಿದ ಉದ್ಯೋಗಿಯ ವಿಧವೆ ಪತ್ನಿಯರಿಗೆ ಪಿಂಚಣಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.
ರೈಲ್ವೆ ಉದ್ಯೋಗಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದಾಗ ಇದು ಅನ್ವಯಿಸುತ್ತದೆ. ಎರಡನೇ ಪತ್ನಿಯಾಗಿರುವ ಅರ್ಜಿದಾರರು ಶೇ. 50ರಷ್ಟು ಪಿಂಚಣಿಗೆ ಅರ್ಹರು ಎಂದು ಪೀಠ ತಿಳಿಸಿದೆ. ಜತೆಗೆ, ಮೊದಲ ಪತ್ನಿ ಮತ್ತು ಆಕೆಯ ಇಬ್ಬರು ಪುತ್ರಿಯರಿಗೆ ಶೇ. 50 ರಷ್ಟು ಪಿಂಚಣಿ ಬಿಡುಗಡೆ ಮಾಡಲು ಆದೇಶಿಸಿರುವ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕರ ಕಚೇರಿಯಲ್ಲಿ ಸಂಚಾರ ವಿಭಾಗದಲ್ಲಿ ಪಾಯಿಂಟ್ಸ್ಮನ್ ಆಗಿ ಆರ್ ರಮೇಶ್ ಬಾಬು ಎಂಬವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಯೊಂದಿಗಿನ ವಿವಾಹದಲ್ಲಿ ಬಾಬು ಅವರಿಗೆ ಮೂವರು ಪುತ್ರಿಯರಿದ್ದಾರೆ. 1999ರ ಡಿಸೆಂಬರ್ 9ರಂದು ಬಾಬು ಅವರು ಪುಷ್ಪಾ ಅವರೊಂದಿಗೆ ತಿರುಪತಿಯಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದರು.